ಸಿದ್ದಾಪುರ, ಜ. ೨೨: ಭಾರತ ಫುಟ್ಬಾಲ್ ತಂಡವು ಬಲಿಷ್ಠವಾಗಿದ್ದು, ಮುಂದಿನ ವಿಶ್ವಕಪ್ ಪಂದ್ಯಾಟದಲ್ಲಿ ಭಾರತ ತಂಡ ಆಡಲಿದೆ ಎಂದು ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಹಾಗೂ ಭಾರತ ಫುಟ್ಬಾಲ್ ತಂಡದ ಹಾಲಿ ತಾಂತ್ರಿಕ ಸಮಿತಿ ಸದಸ್ಯ ಐ.ಎಂ. ವಿಜಯನ್ ವಿಶ್ವಾಸ ವ್ಯಕ್ತಪಡಿಸಿದರು.
ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಅಮ್ಮತ್ತಿಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತ ತಂಡ ಯುವ ಹಾಗೂ ಅನುಭವಿ ಆಟಗಾರರ ಮಿಶ್ರಿತ ತಂಡವಾಗಿದೆ. ಮುಂದಿನ ವಿಶ್ವಕಪ್ ಫುಟ್ಬಾಲ್ ಅರ್ಹತಾ ಪಂದ್ಯಾಟದಲ್ಲಿ ಭಾರತ ತಂಡ ಗೆದ್ದು ವಿಶ್ವಕಪ್‌ಗೆ ಕಾಲಿಡಲಿದೆ. ಏಷ್ಯಾ ಈ ಹಿಂದೆ ಫುಟ್ಬಾಲ್‌ನಲ್ಲಿ ಹಿಂದುಳಿದಿತ್ತು. ಪ್ರಸ್ತುತ ಏಷ್ಯಾದಿಂದ ೮ ತಂಡಗಳು ವಿಶ್ವಕಪ್‌ನಲ್ಲಿ ಭಾಗವಹಿಸಿ ಬಲಾಢ್ಯ ತಂಡಗಳನ್ನು ಮಣಿಸಿದೆ. ಹಾಗೆಯೆ ಭಾರತವೂ ಕೂಡ ಮುಂದೊAದು ದಿನ ವಿಶ್ವಕಪ್ ಆಡಲಿದೆ ಎಂದರು.
ಭಾರತದಲ್ಲಿ ಇಂಡಿಯನ್ ಸೂಪರ್ ಲೀಗ್ ಆರಂಭವಾದ ಬಳಿಕ ಭಾರತೀಯ ಫುಟ್ಬಾಲ್‌ಗೆ ಪುನಶ್ಚೇತನ ದೊರಕಿದೆ. ಅಂತರರಾಷ್ಟ್ರೀಯ ಆಟಗಾರರು ಐ.ಎಸ್.ಎಲ್ ಆಡುತ್ತಿದ್ದಾರೆ. ಆ ಮೂಲಕ ಸ್ಥಳೀಯರಿಗೆ ಪ್ರತಿಭೆ ಅನಾವರಣಕ್ಕೆ ವೇದಿಕೆಯೊಂದಿಗೆ, ಅಂತರರಾಷ್ಟಿçÃಯ ಆಟಗಾರರೊಂದಿಗೆ ಆಡಲು ಅವಕಾಶ ದೊರಕಿದೆ ಎಂದು ತಿಳಿಸಿದರು.
ಇತ್ತೀಚೆಗಿನ ದಿನಗಳಲ್ಲಿ ಪಂದ್ಯಾವಳಿಗಳು ಕಡಿಮೆ ಆಗುತ್ತಿದೆ. ಹಾಗಾಗಿ ಪ್ರತಿಭೆಗಳಿಗೆ ಅವಕಾಶ ದೊರಕುತ್ತಿಲ್ಲ. ಕೊಡಗು ಕ್ರೀಡಾ ಜಿಲ್ಲೆಯಾಗಿದ್ದು, ಫುಟ್ಬಾಲ್‌ಗೂ ಹೆಚ್ಚು ಮಹತ್ವ ನೀಡಲು ಸಲಹೆ ನೀಡಿದರು.
ಕ್ರಿಕೆಟ್ ಶ್ರೀಮಂತ ಕ್ರೀಡೆಯಾಗಿದ್ದು, ಭಾರತದಲ್ಲಿ ಕ್ರಿಕೆಟ್‌ಗೆ ಹೆಚ್ಚು ಒಲವಿದೆ. ವಿಶ್ವದಲ್ಲಿ ಫುಟ್ಬಾಲ್ ಜನಪ್ರಿಯ ಕ್ರೀಡೆಯಾಗಿದ್ದು, ಇತ್ತೀಚೆಗಿನ ದಿನಗಳಲ್ಲಿ ಯುವ ಜನತೆ ಫುಟ್ಬಾಲ್ ಕಡೆ ಒಲವು ತೋರುತ್ತಿದ್ದಾರೆ ಎಂದು ಹೇಳಿದರು.
ತಮ್ಮ ಪ್ರೀತಿಯ ತಂಡ ಯಾವುದೆಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅರ್ಜೆಂಟೀನಾ ಎಂದು ನಗುಮುಖದಿಂದ ಹೇಳಿದರು. ವಿಶ್ವ ಫುಟ್ಬಾಲ್‌ನ ದೇವರು ಎಂದು ಹೇಳಲ್ಪಡುವ ಮರ್ಡೋನ ಜೊತೆಗೆ ಆಡಿದ್ದು ತನ್ನ ಜೀವನದ ಅವಿಸ್ಮರಣೀಯ ಕ್ಷಣ ಎಂದು ಅವರು ಬಣ್ಣಿಸಿದರು.
ಈ ಹಿಂದೆ ಸರ್ಕಾರಿ ನೌಕರಿಯ ಉದ್ದೇಶದಿಂದ ಫುಟ್ಬಾಲ್ ಸೇರಿದಂತೆ ಕ್ರೀಡೆಯನ್ನು ಆಡುತ್ತಿದ್ದರು. ಆದರೆ ಇಂದಿನ ಪೋಷಕರು ಸಣ್ಣ ಪ್ರಾಯದಿಂದಲೇ ಕ್ರೀಡೆಗೆ ಮಹತ್ವ ನೀಡುತ್ತಿದ್ದಾರೆ. ವಿದ್ಯಾರ್ಥಿಗಳನ್ನು ಮೊಬೈಲ್‌ನಲ್ಲಿ ಆಟವಾಡದೇ ಮೈದಾನದಲ್ಲಿ ಆಡಲು ಪ್ರೋತ್ಸಾಹಿಸಬೇಕು. ಕೊಡಗು ಉತ್ತಮ ಪ್ರಕೃತಿ ಹೊಂದಿರುವ ಪ್ರದೇಶ. ಮಿಲನ್ಸ್ ತಂಡ ಜಿಲ್ಲೆಯ ಫುಟ್ಬಾಲ್‌ನಲ್ಲಿ ಮೈಲುಗಲ್ಲು ಹಾಕಿದೆ. ಜಿಲ್ಲೆಯಲ್ಲಿ ಹೆಚ್ಚೆಚ್ಚು ಫುಟ್ಬಾಲ್ ಆಟಗಾರರು ತಯಾರಾಗಲಿ ಎಂದು ಆಶಿಸಿದರು.
ಈ ಸಂದರ್ಭ ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರೆಜಿತ್ ಕುಮಾರ್ ಗುಹ್ಯ, ಪ್ರಧಾನ ಕಾರ್ಯದರ್ಶಿ ಎ.ಎಸ್. ಮುಸ್ತಫಾ, ಉಪಾಧ್ಯಕ್ಷ ಪುತ್ತಂ ಪ್ರದೀಪ್, ನಿರ್ದೇಶಕರಾದ ಕುಟ್ಟಂಡ ಅಜಿತ್ ಕರುಂಬಯ್ಯ, ಕಿಶೋರ್ ಕುಮಾರ್ ಶೆಟ್ಟಿ, ಸದಸ್ಯರಾದ ಎ.ಎನ್ ವಾಸು ಇದ್ದರು.