ಪೊನ್ನಂಪೇಟೆ, ಜ. ೨೨: ವಿದ್ಯಾರ್ಥಿಗಳು ಆದರ್ಶ ವ್ಯಕ್ತಿಗಳ ಜೀವನ ಮತ್ತು ಅವರ ಸಾಧನೆಗಳನ್ನು ಅಧ್ಯಯನ ಮಾಡುವ ಮೂಲಕ ಅವರಂತೆ ಮೇಲ್ಮಟ್ಟಕ್ಕೆ ಬೆಳೆಯಲು ಮುಂದಾಗಬೇಕು ಎಂದು ವಿದ್ಯಾರ್ಥಿ ಗಳಿಗೆ ಕರೆ ನೀಡಿದ ಹಿರಿಯ ಸಾಹಿತಿ ಡಾ. ಜೆ. ಸೋಮಣ್ಣ, ಈ ರೀತಿಯಾಗಿ ಅಧ್ಯಯನ ಮಾಡುವುದರಿಂದ ಶೈಕ್ಷಣಿಕವಾಗಿಯೂ ಹೆಚ್ಚು ಪ್ರಗತಿ ಸಾಧಿಸಬಹುದು ಎಂದು ಹೇಳಿದರು.
ಪೊನ್ನಂಪೇಟೆ ಸರ್ಕಾರಿ ಪ.ಪೂ. ಕಾಲೇಜಿನ ವಾರ್ಷಿಕೋತ್ಸವವನ್ನು ಉದ್ಘಾಟಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಶಿಸ್ತು ಮತ್ತು ಸಮಯಪ್ರಜ್ಞೆ ಬಹಳ ಮುಖ್ಯ. ಇದನ್ನು ವಿದ್ಯಾರ್ಥಿ ಜೀವನದಿಂದಲೇ ಅಳವಡಿಸಿಕೊಳ್ಳಬೇಕು. ತಮ್ಮ ಪೋಷಕರು ಕಂಡ ಕನಸನ್ನು ಮಕ್ಕಳು ನನಸಾಗಿಸಲು ಶಿಸ್ತು ಮತ್ತು ಸಮಯ ಪ್ರಜ್ಞೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದಲ್ಲದೆ, ಅಶಿಸ್ತು ಎಂಬುದು ಇಡೀ ಬದುಕನ್ನೇ ಶೂನ್ಯವಾಗಿಸಿಬಿಡುತ್ತದೆ. ಆದ್ದರಿಂದ ಅಶಿಸ್ತಿನಿಂದ ವರ್ತಿಸಿ ಬದುಕನ್ನು ಹಾಳು ಮಾಡಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಂಡಚAಡ ದಿನೇಶ್ ಚಿಟ್ಟಿಯಪ್ಪ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಬದುಕಿನ ಕಷ್ಟ ಕಾರ್ಪಣ್ಯಗಳ ಅರಿವು ಹೆಚ್ಚಿರುತ್ತದೆ. ಇದನ್ನು ಅರಿತುಕೊಂಡು ಮುಂದೆ ಬರಲಿರುವ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ತೇರ್ಗಡೆ ಹೊಂದಬೇಕು ಎಂದು ಕರೆ ನೀಡಿದರು.
ವಾರ್ಷಿಕೋತ್ಸವದ ಅಂಗವಾಗಿ ನಡೆದ ನೃತ್ಯ, ಸಂಗೀತ, ಏಕಪಾತ್ರಾಭಿನಯ, ಜಾನಪದ ಗೀತೆ ಮೊದಲಾದ ಸಾಂಸ್ಕೃತಿಕ ಕಾರ್ಯ ಕ್ರಮಗಳ ಮೂಲಕ ಪೊನ್ನಂಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಂಭ್ರಮಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕನ್ನಡ, ಮಲೆಯಾಳಂ, ತಮಿಳು, ಹಿಂದಿ ಹಾಡುಗಳಿಗೆ ವಿದ್ಯಾರ್ಥಿಗಳು ಸುಂದರವಾಗಿ ಹೆಜ್ಜೆ ಹಾಕಿದರು. ಇವುಗಳ ಜೊತೆಗೆ ದೇಶ ಕಾಯುವ ಸೈನಿಕರ ನೋವಿನ ಸ್ಥಿತಿ, ಸಾವು ಬದುಕಿನ ನಡುವಿನ ಹೋರಾಟ, ಕುಟುಂಬದ ಸಂಕಟ ಮೊದಲಾದವುಗಳನ್ನು ಕಿರು ನಾಟಕದ ಮೂಲಕ ಸುಂದರವಾಗಿ ಅಭಿನಯಿಸಿದರು.
ಪೊನ್ನಂಪೇಟೆ ಗ್ರಾ.ಪಂ. ಸದಸ್ಯ ರಾಮಕೃಷ್ಣ, ನಿವೃತ್ತ ಉಪನ್ಯಾಸಕ ವಿಶ್ವನಾಥ್ ಮೊದಲಾದವರು ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಕಾಲೇಜಿನ ಪ್ರಾಚಾರ್ಯರಾದ ಆರ್.ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ರಾಜೇಂದ್ರ ಪ್ರಸಾದ್ ವರದಿ ವಾಚಿಸಿದರು. ಗ್ರಂಥಪಾಲಕ ಸಿದ್ದಲಿಂಗ ಸ್ವಾಮಿ, ಉಪನ್ಯಾಸಕರಾದ ಸಬಿತಾ, ಪಲ್ಲವಿ, ದೀಪಾ,ರಾಜೇಶ್ವರಿ, ಪವನ್ ಮೊದಲಾದವರು ಹಾಜರಿದ್ದರು.