ಮಡಿಕೇರಿ, ಜ. ೨೦: ಮುಖ್ಯ ಮಂತ್ರಿಗಳ ಅಮೃತ ನಗರೋತ್ಥಾನ ನಾಲ್ಕನೇ ಹಂತದಡಿ ನಗರದ ಭಗವತಿ ದೇವಸ್ಥಾನ ಬಳಿಯಿಂದ ಗಾಳಿಬೀಡು ಜಂಕ್ಷನ್‌ವರೆಗೆ ರಸ್ತೆ ನಿರ್ಮಾಣಕ್ಕೆ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ಭೂಮಿಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಮಡಿಕೇರಿ ನಗರದಲ್ಲಿ ಸರ್ವಋತು ರಸ್ತೆ ಅಭಿವೃದ್ಧಿಗೆ ೧೩ ಕೋಟಿ ರೂ. ವೆಚ್ಚದ ಟೆಂಡರ್ ಅನುಮೋದನೆ ಆಗಿದ್ದು, ಆ ನಿಟ್ಟಿನಲ್ಲಿ ೨.೪೩ ಕೋಟಿ ರೂ. ವೆಚ್ಚದ ವಿವಿಧ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ.

ಮಡಿಕೇರಿ ನಗರದಲ್ಲಿನ ಹಲವು ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಾರ್ವಜನಿಕರ ಕುಂದುಕೊರತೆ ಸಭೆಯನ್ನು ಮುಂದಿನ ಶುಕ್ರವಾರ ಏರ್ಪಡಿಸಲಾಗಿದೆ. ಆ ನಿಟ್ಟಿನಲ್ಲಿ ನಗರದ ಹಲವು ಸಮಸ್ಯೆಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವಲ್ಲಿ ಕ್ರಮವಹಿಸಲಾಗಿದೆ ಎಂದರು.

ಮಡಿಕೇರಿ ನಗರಸಭೆಯು ತೆರಿಗೆ ಸಂಗ್ರಹದಲ್ಲಿ ಶೇಕಡಾವಾರು ಪ್ರಗತಿ ಸಾಧಿಸಿದೆ. ನಗರಸಭೆಯಿಂದ ಸಾರ್ವಜನಿಕರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಅಗತ್ಯ ಕೆಲಸಗಳು ನಡೆದಿವೆ. ನಗರದ ಎಲ್ಲಾ ರಸ್ತೆಗಳನ್ನು ಗುಂಡಿ ಮುಚ್ಚುವ ಮತ್ತು ರಸ್ತೆ ಅಭಿವೃದ್ಧಿ ಕೆಲಸಗಳು ನಡೆಯಲಿವೆ ಎಂದರು.

ಮಡಿಕೇರಿ ನಗರದ ವಾರ್ಡ್ ನಂಬರ್ ೦೧ ರಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ, ವಾರ್ಡ್ ನಂ.೮ ರಲ್ಲಿ ಒಳದಾರಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ, ವಾರ್ಡ್ ನಂ.೯ ರಲ್ಲಿ ಗೆಜ್ಜೆ ಸಂಗಪ್ಪ ಸಮುದಾಯ ಭವನ ಉನ್ನತ್ತೀಕರಣ ಕಾಮಗಾರಿ, ವಾರ್ಡ್ ನಂ.೧೩ ರ ಪುಟಾಣಿ ನಗರದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ, ವಾರ್ಡ್ ನಂಬರ್ ೧೪ ರ ಮುನೇಶ್ವರ ದೇವಸ್ಥಾನ ಹತ್ತಿರ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ, ವಾರ್ಡ್ ನಂ.೨೩ ರ ಅಶೋಕ್ ಪುರದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ ಹೀಗೆ ಒಟ್ಟು ೨೪೩.೭೮ ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.

ನಗರಸಭಾ ಅಧ್ಯಕೆÀ್ಷ ಅನಿತಾ ಪೂವಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ ಸುಬ್ರಮಣಿ, ಪೌರಾಯುಕ್ತರಾದ ವಿಜಯ, ನಗರಸಭೆ ಸದಸ್ಯರು, ಇತರರು ಇದ್ದರು.