ಕೂಡಿಗೆ, ಜ. ೨೧: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಮತ್ತು ಯಡವನಾಡು ಗ್ರಾಮದಲ್ಲಿ ಪುರಾತನ ಶಿಲೆಗಳು, ಶಿಲಾಶಾಸನ, ಶಿಲಾ ಸಮಾಧಿಗಳು, ೬ ನಿಲುಗಲ್ಲುಗಳು ಸೇರಿದಂತೆ ಪುರಾತನ ಕಲ್ಲಿನ ಚಪ್ಪಡಿಯಲ್ಲಿ ನಿರ್ಮಿಸಿದ ದೇವಾಲಯ ಪತ್ತೆಯಾಗಿದೆ.

ಹುದುಗೂರು, ಯಡವನಾಡು ಭಾಗದಲ್ಲಿ ಜಿಲ್ಲಾ ಪುರಾತತ್ವ ಇಲಾಖೆಯ ವತಿಯಿಂದ ಎರಡು ಗ್ರಾಮಗಳ ಪ್ರದೇಶದಲ್ಲಿರುವ ಪ್ರಾಚೀನ ಅವಶೇಷಗಳ ಮಾಹಿತಿ ಸಂಗ್ರಹ ಕಾರ್ಯ ಮತ್ತು ಸರ್ವೆ ಕಾರ್ಯ ಸಂದರ್ಭ ಇವುಗಳು ಪತ್ತೆಯಾಗಿದೆ.

(ಮೊದಲ ಪುಟದಿಂದ)

ಮಡಿಕೇರಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ಇಲಾಖೆಯ ಅಧಿಕಾರಿ ರೇಖಾ, ಸಹಾಯಕ ಅಧಿಕಾರಿ ತಮ್ಮಯ್ಯ ನೇತೃತ್ವದ ತಂಡ, ಹುದುಗೂರು ವಲಯ ಅರಣ್ಯ ಅಧಿಕಾರಿ ಮೋಹನ್ ಕುಮಾರ್, ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯ ಹೆಚ್.ಎಸ್. ರವಿ ಸೇರಿದಂತೆ ಗ್ರಾಮಸ್ಥರು ಪರಿಶೀಲನೆ ನಡೆಸುವ ಸಂದರ್ಭ ಹುದುಗೂರು ಗ್ರಾಮದ ಇಂದ್ರಾವತಿ ರೈ ಅವರ ಜಮೀನಿನಲ್ಲಿ ೧ ಶಿಲಾ ಶಾಸನ, ೧ ಸತಿಗಲ್ಲು, ಉಮಾಮಹೇಶ್ವರ ದೇವಾಲಯ ಆವರಣದಲ್ಲಿ ೧ ಸತಿಗಲ್ಲು, ಸಮೀಪದ ಗಂಧದಹಾಡಿಯಲ್ಲಿ ಅರಣ್ಯ ಪ್ರದೇಶದ ಮಧ್ಯದಲ್ಲಿ ಹಾಗೂ ಯಡವನಾಡು ನಿಂಗಮ್ಮ ಅವರ ಜಮೀನಿನಲ್ಲಿ ೩ ಶಿಲಾ ಸಮಾಧಿಗಳು ಪತ್ತೆಯಾಗಿವೆ,

ಇವುಗಳು ಕ್ರಿಸ್ತ ಪೂರ್ವಕ್ಕೆ ಸೇರಿದ್ದವುಗಳು ಎಂದು ಅಂದಾಜು ಮಾಡಲಾಗಿದೆ. ಯಡವನಾಡು ಪೂರ್ವ ಗಸ್ತು ಮೀಸಲು ಅರಣ್ಯದಲ್ಲಿ ಒಂದೇ ಸ್ಥಳದಲ್ಲಿ ೬ ನಿಲುಗಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಹಾರಂಗಿ ಹಿನ್ನೀರಿನಲ್ಲಿ ಪುರಾತನ ಕಲ್ಲಿನ ಚಪ್ಪಡಿಯಲ್ಲಿ ನಿರ್ಮಿಸಿದ ದೇವಾಲಯವನ್ನು ಅಧಿಕಾರಿಗಳು ವೀಕ್ಷಣೆ ಮಾಡಿದರು.

ಪುರಾತತ್ವ ಇಲಾಖೆ ಗ್ರಾಮ ಪಂಚಾಯಿತಿಗೆ ತಿಳಿಸಿದ ಮೇರೆಗೆ ಮಾಹಿತಿ ಪಡೆದುಕೊಂಡ ಗ್ರಾಮ ಪಂಚಾಯಿತಿ ಸದಸ್ಯ ಹೆಚ್.ಎಸ್. ರವಿ ಅವರು ಸಂಬAಧಿಸಿದ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿ ಪತ್ರ ವ್ಯವಹಾರ ನಡೆಸಿದ ನಂತರ ಅಧಿಕಾರಿಗಳ ತಂಡ ಅರಣ್ಯ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ಗ್ರಾಮಸ್ಥರು ಒಳಗೊಂಡAತೆ ಶಿಲಾಶಾಸನಗಳು ಇದ್ದ ಸ್ಧಳಗಳಿಗೆ ತೆರಳಿ ಪರಿಶೀಲನೆ ನಡೆಸಲಾಯಿತು. ಶಿಲೆಗಳನ್ನು ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಮಾಹಿತಿಯನ್ನು ತಿಳಿಸುವ ಉದ್ದೇಶ ಹೊಂದಲಾಗಿದೆ.

-ಕೆ.ಕೆ. ನಾಗರಾಜಶೆಟ್ಟಿ