*ಗೋಣಿಕೊಪ್ಪ, ಜ. ೨೧: ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರಿಯಮ್ಮ ಕಾಲೋನಿ ಸಂಪರ್ಕ ರಸ್ತೆಗೆ ಕಾವೇರಿ ನೀರಾವರಿ ನಿಗಮದ ವತಿಯಿಂದ ಬಿಡುಗಡೆಯಾದ ೯೦ ಲಕ್ಷ ಅನುದಾನದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ರಾಜ್ಯ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿದರು.

ಕಾಲೋನಿ ಸಂಪರ್ಕ ರಸ್ತೆ ಬದಿಯಲ್ಲಿ ಪೂಜೆ ನೆರವೇರಿಸಿದ ಶಾಸಕರು ಕಾಲೋನಿಗಳು ಅಭಿವೃದ್ದಿ ಕಂಡಾಗ ದೇಶವು ಸಂವೃದ್ಧಿಯತ್ತ ಸಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವ ಕಾರ್ಯ ನಡೆಯಬೇಕಾಗಿದೆ ಎಂದು ಹೇಳಿದರು.

ಗಾಂಧಿ ಕಂಡ ಕನಸ್ಸಿನ ಭಾರತವನ್ನು ಕಟ್ಟುವಲ್ಲಿ ಮೋದಿ ಸರ್ಕಾರ ಮುಂದಾಗಿದೆ. ಬಡವ, ದೀನ ದಲಿತರ ಏಳಿಗೆಗಾಗಿ ಹಲವು ಯೋಜನೆಗಳ ಮೂಲಕ ಅನುಕೂಲ ಕಲ್ಪಿಸಿದೆ. ಶಿಕ್ಷಣ ಮತ್ತು ಉದ್ಯೋಗ ದಲ್ಲಿಯೂ ಮೀಸಲಾತಿಯನ್ನು ಇಟ್ಟಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಚೇತರಿಸಿಕೊಳ್ಳುವ ಉದ್ದೇಶದೊಂದಿಗೆ ಹಲವು ಅನುಕೂಲಕರ ವ್ಯವಸ್ಥೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರವು ರೂಪಿಸಿದೆ. ಸೌಲಭ್ಯಗಳನ್ನು ಪಡೆದುಕೊಳ್ಳಲು ಪ್ರತಿಯೊಬ್ಬರು ಮುಂದೆ ಬರಬೇಕಾಗಿದೆ ಎಂದರು.

ಗ್ರಾ.ಪಂ. ಅಧ್ಯಕ್ಷೆ ಎಂ.ಪಿ ಮೀನ, ಸದಸ್ಯರಾದ ಚೆಪುö್ಪಡೀರ ಪ್ರದೀಪ್ ಪೂವಯ್ಯ, ಸಿದ್ದಪ್ಪ, ನಾರಾಯಣ, ಸರಸ್ವತಿ, ಸುಶೀಲಾ, ಗುತ್ತಿಗೆದಾರ ರುಗಳಾದ ನಾಮೇರ ನವೀನ್, ದಿಲೀಪ್, ಕಾವೇರಿ ನಿರಾವರಿ ನಿಗಮದ ಇಂಜಿನಿಯರ್ ನವೀನ್, ಪ್ರಮುಖರಾದ ಕೇಳಪಂಡ ಸುದೀರ್, ಆದೇಂಗಡ ವಿನು ಚಂಗಪ್ಪ, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ ಸೇರಿದಂತೆ ಗ್ರಾಮಸ್ಥರು ಪಕ್ಷದ ಕಾರ್ಯಕರ್ತರು ಇದ್ದರು.