ಸೋಮವಾರಪೇಟೆ, ಜ. ೧೯: ಸಮೀಪದ ಹಾನಗಲ್ಲು ಶೆಟ್ಟಳ್ಳಿ ಗ್ರಾಮದಲ್ಲಿ ಈ ಹಿಂದೆ ಇದ್ದ ಸಾರ್ವಜನಿಕ ಸ್ಮಶಾನ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡು ಕಾಫಿ ತೋಟ ನಿರ್ಮಿಸಿದ್ದು, ಇದನ್ನು ತೆರವುಗೊಳಿಸಿ ಗ್ರಾಮಕ್ಕೆ ಸ್ಮಶಾನದ ಉದ್ದೇಶಕ್ಕಾಗಿ ಜಾಗವನ್ನು ಮೀಸಲಿಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದರೂ, ತಾಲೂಕು ಸರ್ವೆ ಇಲಾಖೆಯಿಂದ ೨ನೇ ಬಾರಿಗೆ ಆಗಮಿಸಿದ ಸಿಬ್ಬಂದಿಗಳು ಜಾಗದ ಸರ್ವೆ ನಡೆಸದೆ ಹಿಂತಿರುಗಿದ್ದಾರೆ.
ಹಾನಗಲ್ಲುಶೆಟ್ಟಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಂಭಾಗ ಇರುವ ಸುಮಾರು ೬ ಎಕರೆ ಪೈಸಾರಿ ಜಾಗದಲ್ಲಿ ಕಳೆದ ಅನೇಕ ವರ್ಷಗಳ ಹಿಂದೆ ಗ್ರಾಮದಲ್ಲಿ ಮೃತಪಟ್ಟವರ ಅಂತ್ಯಸAಸ್ಕಾರ ನಡೆಯುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಗ್ರಾಮದ ಈರ್ವರು ಪೈಸಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಕಾಫಿ ತೋಟವನ್ನು ನಿರ್ಮಿಸಿದ್ದಾರೆ. ಈ ಬಗ್ಗೆ ಗ್ರಾಮದ ಕೆಲವರು ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿ, ಗ್ರಾಮದ ಸ್ಮಶಾನಕ್ಕೆ ಜಾಗವನ್ನು ಮೀಸಲಿಡುವ ಉದ್ದೇಶದಿಂದ ಪೈಸಾರಿ ತೆರವು ಮಾಡಬೇಕೆಂದು ಮನವಿ ಮಾಡಿದ್ದರು.
ಈ ವಿಚಾರವಾಗಿ ಗ್ರಾಮದಲ್ಲಿ ಸಭೆ ನಡೆದು ಈ ಹಿಂದೆ ಇದೇ ಸ್ಥಳದಲ್ಲಿ ಹಲವಷ್ಟು ಶವಸಂಸ್ಕಾರ ನಡೆಸಲಾಗಿದೆ. ಸ್ಮಶಾನವಾಗಿ ಬಳಕೆಯಾಗುತ್ತಿದ್ದ ಜಾಗವನ್ನು ಇದೀಗ ಒತ್ತುವರಿ ಮಾಡಿಕೊಂಡಿದ್ದು, ಸರ್ವೆ ಇಲಾಖೆಗೆ ಮಾಹಿತಿ ನೀಡಿ ಪೈಸಾರಿಯನ್ನು ಸರ್ವೆ ಮಾಡಿಸಲು ಕ್ರಮ ವಹಿಸುವ ಬಗ್ಗೆ ತೀರ್ಮಾನಿಸಲಾಗಿತ್ತು.
ಈ ಮಧ್ಯೆ ಸ್ಮಶಾನವಾಗಿ ಬಳಕೆಯಾಗುತ್ತಿದ್ದ ಜಾಗವನ್ನೂ ಒಳಗೊಂಡAತೆ ಒಟ್ಟು ೬ ಎಕರೆ ಜಾಗಕ್ಕೆ ಒತ್ತುವರಿದಾರರು ಅಕ್ರಮ ಸಕ್ರಮ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದು, ಮಂಜೂರಾತಿಗಾಗಿ ಕೋರಿದ್ದರು. ತಾ.೧೮ರಂದು ೨ನೇ ಬಾರಿಗೆ ಸರ್ವೆ ಮಾಡಲು ಆಗಮಿಸಿದ ಸರ್ವೆ ಇಲಾಖೆಯ ಸಿಬ್ಬಂದಿಗಳು ಆರಂಭದಲ್ಲಿ ಒಂದಿಷ್ಟು ಜಾಗವನ್ನು ಸರ್ವೆ ಮಾಡಲು ಮುಂದಾದರು. ನಂತರ ಸಂಬAಧಿಸಿದ ದಾಖಲೆಗಳು ಇಲ್ಲವೆಂದು ತಿಳಿಸಿ ಸ್ಥಳದಿಂದ ತೆರಳಿದರು.
ನಂತರ ಗ್ರಾಮಾಧ್ಯಕ್ಷ ಎ.ಜೆ. ಸುರೇಶ್ ಅವರ ಅಧ್ಯಕ್ಷತೆಯಲ್ಲಿ ಮತ್ತೆ ಸಭೆ ನಡೆಸಿದ ಗ್ರಾಮಸ್ಥರು, ಗ್ರಾಮಕ್ಕೆ ಸ್ಮಶಾನದ ಅವಶ್ಯಕತೆಯಿದೆ. ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಹೆಚ್.ಎಂ. ವಿಠಲ ಮತ್ತು ಎಂ.ಕೆ. ಪ್ರಸನ್ನ ಅವರುಗಳು ಒಂದಿಷ್ಟು ಜಾಗವನ್ನು ಬಿಟ್ಟುಕೊಡಬೇಕು ಎಂದು ಅಭಿಪ್ರಾಯಿಸಿದರು. ಆದರೆ ಒತ್ತುವರಿದಾರರು ಜಾಗವನ್ನು ಬಿಟ್ಟುಕೊಡಲು ಒಪ್ಪದಿದ್ದಾಗ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಸ್ಮಶಾನಕ್ಕೆ ಜಾಗ ಮೀಸಲಿಡುವ ಬಗ್ಗೆ ಮನವಿ ಮಾಡಲು ತೀರ್ಮಾನಿಸಲಾಯಿತು.
ಒತ್ತುವರಿ ಮಾಡಿಕೊಂಡಿರುವ ಜಾಗದ ಸ್ವಲ್ಪ ಭಾಗವನ್ನು ಸ್ಮಶಾನಕ್ಕೆ ಮೀಸಲಿರಿಸುವಂತೆ ನಾವುಗಳು ಮನವಿ ಸಲ್ಲಿಸಿದ್ದೇವೆ. ಇದನ್ನೇ ನೆಪವಾಗಿಟ್ಟು ಕೊಂಡು ನಮ್ಮ ವಿರುದ್ಧ ವಕೀಲರಿಂದ ನೋಟೀಸ್ ಕಳುಹಿಸಿದ್ದಾರೆ ಎಂದು ಗ್ರಾಮಸ್ಥರಾದ ಚಂದ್ರಕಾAತ್, ಮಧುಸೂಧನ್ ಅವರುಗಳು ಅಸಮಾಧಾನ ವ್ಯಕ್ತಪಡಿಸಿದರು.
ಈ ನೋಟೀಸ್ ಬಗ್ಗೆ ಸಭೆಯಲ್ಲಿ ಚರ್ಚೆಗೆ ಬಂದು, ಸರ್ಕಾರಿ ಪೈಸಾರಿ ಜಾಗದ ಕನಿಷ್ಟ ೪೦ ಸೆಂಟ್ಸ್ ಜಾಗ ವನ್ನಾದರೂ ಸ್ಮಶಾನಕ್ಕೆ ಬಿಟ್ಟುಕೊಡಬೇಕು ಎಂದು ಗ್ರಾಮಸ್ಥರು ಅಭಿಪ್ರಾಯಿಸಿದರು. ಇದಕ್ಕೆ ಒತ್ತುವರಿದಾರರು ಒಪ್ಪದ ಹಿನ್ನೆಲೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಮುಖಾಂತರ ಸಮಸ್ಯೆ ಬಗೆಹರಿಸಿಕೊಳ್ಳಲು ತೀರ್ಮಾನಿಸಲಾಯಿತು.