ಸುಂಟಿಕೊಪ್ಪ, ಜ. ೧೯ : ವಿಶೇಷಚೇತನರ ಬದುಕಿಗೆ ಆಸರೆಯಾಗಲು ಸರಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ವಿಶೇಷಚೇತನರ ಇಲಾಖೆಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಹೇಳಿದರು. ಸುಂಟಿಕೊಪ್ಪ ಗ್ರೇಡ್ ೧ ಗ್ರಾ. ಪಂ. ಯ ವಿಶೇಷಚೇತನರ ಗ್ರಾಮ ಸಭೆಯು ಗ್ರಾ.ಪಂ.ಅಧ್ಯಕ್ಷೆ ಶಿವಮ್ಮ ಅವರ ಅಧ್ಯಕ್ಷತೆಯಲ್ಲಿ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ವಿಶೇಷಚೇತನರು ಶೇ. ೭೫ ಇದ್ದವರಿಗೆ ಯಂತ್ರ ಚಾಲಿತ ದ್ವಿಚಕ್ರ ವಾಹನವನ್ನು ಇಲಾಖೆಯಿಂದ ನೀಡಲಾಗುತ್ತಿದೆ. ಇದಕ್ಕೆ ಬಹಳಷ್ಟು ಅರ್ಜಿ ಬರುತ್ತಿದ್ದು, ಕೊಡಗಿಗೆ ಕೇವಲ ೫ ದ್ವಿಚಕ್ರ ವಾಹನಕ್ಕೆ ಅನುದಾನ ಲಭ್ಯವಿದೆ. ಜಿಲ್ಲಾಧಿಕಾರಿಗಳ ನೇತೃತ್ವದ ಸಭೆಯಲ್ಲಿ ಅರ್ಹರನ್ನು ಆಯ್ಕೆಮಾಡಲಾಗುತ್ತಿದೆ. ಗ್ರಾಮ ೧ ಸೇವಾಸಿಂಧು ಕೇಂದ್ರ ತೆರೆಯಲು ವಿಶೇಷ ಚೇತನರಿಗೆ ಸಹಾಯಧನ ನೀಡಲಾಗು ತ್ತಿದೆ. ರಿಯಾಯಿತಿ ದರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡಲಾಗುತ್ತಿದೆ. ರೈಲಿನಲ್ಲಿ ಸಂಚರಿಸಲು ಉಚಿತ ಪಾಸ್ ನೀಡಲಾಗುತ್ತಿದೆ. ವಿಶೇಷಚೇತನರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಈ ಇಲಾಖೆಯಿಂದ ನೀಡಲಾಗುತ್ತಿದೆ. ಮಾನಸಿಕ ಸಮಸ್ಯೆ ಇರುವವರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಲಭ್ಯವಾಗುತ್ತಿದೆ. ಮಲಗಿದಲ್ಲೇ ಇರುವ ವಾಟರ್ ಬೆಡ್ ಕಲ್ಪಿಸಲಾಗುತ್ತಿದೆ. ಎಸ್‌ಎಸ್‌ಎಲ್‌ಸಿ ಪಾಸಾದ ಟೈಲರಿಂಗ್ ಕಲಿತ, ಶ್ರವಣದೋಷವುಳ್ಳ ಮಹಿಳೆಯರಿಗೆ ಟೈಲರಿಂಗ್ ಮಿಷನ್ ಇಲಾಖೆಯಿಂದ ನೀಡಲಾಗುವುದೆಂದು ಚಂದ್ರಶೇಖರ್ ತಿಳಿಸಿದರು. ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿ ಗ್ರಾ. ಪಂ. ವತಿಯಿಂದ ಶೇಕಡ ೫ ವಿಶೇಷ ಚೇತನರಿಗೆ ಮೀಸಲಿಟ್ಟ ಅನುದಾನವನ್ನು ಪಂಚಾಯಿತಿ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಂದಿ ಇದ್ದು ಮೂಲ ಸೌಲಭ್ಯಗಳನ್ನು ಒದಗಿಸಲು ಪಂಚಾಯಿತಿ ಕ್ರಮಕೈಗೊಳ್ಳಲಿದೆ ಎಂದು ನುಡಿದರು. ಸಭೆಯಲ್ಲಿ ಗ್ರಾ.ಪಂ. ಸದಸ್ಯರುಗಳಾದ ಪಿ.ಎಫ್.ಸಬಾಸ್ಟಿನ್, ಪಿ.ಆರ್.ಸುನಿಲ್‌ಕುಮಾರ್, ಸೋಮನಾಥ್, ಶಬ್ಬೀರ್, ರಫೀಕ್‌ಖಾನ್, ವಸಂತಿ, ಲೆಕ್ಕಪರಿಶೋಧಕಿ ಚಂದ್ರಕಲಾ ಅಂಬೇಕಲ್, ಬಿಲ್‌ಕಲೆಕ್ಟರ್ ಶ್ರೀನಿವಾಸ್, ಸಿಬ್ಬಂದಿಗಳಾದ ಸಂಧ್ಯಾ, ಡಿ.ಎಂ.ಮAಜುನಾಥ್ ಹಾಗೂ ಮಂದಣ್ಣ ಇದ್ದರು.