ಮಡಿಕೇರಿ, ಜ. ೧೯: ಕೊಡಗು ಜಿಲ್ಲೆಯ ಜಮ್ಮಾಬಾಣೆ ಜಾಗದ ಮಾಲೀಕತ್ವದ ವಿಷಯ ಮತ್ತೆ ರಾಜ್ಯ ಉಚ್ಚನ್ಯಾಯಾಲಯದಲ್ಲಿ ವಾದ ವಿವಾದಕ್ಕೆ ಎಡೆಯಾಗಿ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ವಿ. ಶ್ರೀಶಾನಂದ ಅವರು ತೀರ್ಪೊಂದನ್ನು ಹೊರಡಿಸಿ ಸಿವಿಲ್ ನ್ಯಾಯಾಲಯದಲ್ಲಿ ಜಮ್ಮಾಬಾಣೆ ಮಾಲೀಕತ್ವದ ಹಕ್ಕು ಪ್ರಸ್ತಾಪಿಸುವಂತಿಲ್ಲ ಎಂದು ಮಹತ್ವದ ಆದೇಶವೊಂದನ್ನು ಕಳೆದ ಡಿ. ೧೫ ರಂದು ಹೊರಡಿಸಿದ್ದಾರೆ. (ಖಈಂ.ಓo.೮೯೭/೨೦೦೫)

ಪ್ರಕರಣ ಹಿನ್ನೆಲೆ

ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕು ಹಾಗೂ ಬೇತ್ರಿ ಬಳಿಯ ನಾಲ್ಕೇರಿ ಗ್ರಾಮದ ಪಲೆಯಂಡ ಮಧುಕುಮಾರ್ ಎಂಬುವವರು ವೀರಾಜಪೇಟೆ ಸಿವಿಲ್ ನ್ಯಾಯಾಲಯ ದಲ್ಲಿ ಔ.S.ಓo.೨೭/೧೯೯೯ ದಾವೆಯೊಂದನ್ನು ಅವರ ಮನೆಯವರಾದ ಪಲೆಯಂಡ ದೇವಯ್ಯ ಹಾಗೂ ಇತರರ ಮೇಲೆ ದಾಖಲಿಸಿದ್ದರು. ಜಮ್ಮಾಬಾಣೆ ಜಾಗದ ಸರ್ವೆ ನಂ.೩೭/೧ ಹಾಗೂ ೩೭/೨ ರ ಮಾಲೀಕತ್ವ ತನ್ನದು ಎಂದು ಘೋಷಿಸುವಂತೆ ಹಾಗೂ ತಡೆಯಾಜ್ಞೆ ನೀಡುವಂತೆ ಕೋರಿದ್ದರು. ತಾ| ೧೬/೦೪/೨೦೦೫ ರಂದು ಸದ್ರಿ ದಾವೆಯನ್ನು ಪುರಸ್ಕರಿಸಿ ವೀರಾಜಪೇಟೆಯ ಸಿವಿಲ್ ಹಿರಿಯ ನ್ಯಾಯಾಧೀಶರು ಮಧುಕುಮಾರ್ ಪರವಾಗಿ ತೀರ್ಪನ್ನು ನೀಡಿ ದಾವೆಯನ್ನು ಡಿಕ್ರಿ ಮಾಡಿದರು. ಸದ್ರಿ ತೀರ್ಪಿನ ವಿರುದ್ಧ ಎದುರುದಾರ ರಾದ ಪಲೆಯಂಡ ದೇವಯ್ಯ ಹಾಗೂ ಇತರರು ರಾಜ್ಯ ಉಚ್ಚ ನ್ಯಾಯಾಲಯ ದಲ್ಲಿ ಅಪೀಲು ಸಲ್ಲಿಸಿದ್ದರು. ಸದ್ರಿ ಅಪೀಲು ಇತ್ತೀಚೆಗೆ ವಿಚಾರಣೆಗೆ ಒಳಪಟ್ಟಿತು.

ಮೇಲ್ಮನವಿದಾರ ಪಲೆಯಂಡ ದೇವಯ್ಯ ಹಾಗೂ ಇತರರ ಪರವಾಗಿ ಹಿರಿಯ ನ್ಯಾಯವಾದಿ ಎನ್. ರವೀಂದ್ರನಾಥ್ ಕಾಮತ್ ಅವರು ವಾದಿಸಿ ಕೆಳ ನ್ಯಾಯಾಲಯದ ತೀರ್ಪು ಸಮಂಜಸ ಹಾಗೂ ನ್ಯಾಯಯುತವಲ್ಲ, ಜಮ್ಮಾಬಾಣೆ ಜಾಗವು ಸರ್ಕಾರಕ್ಕೆ ಸೇರಿದ್ದು ಸಿವಿಲ್ ನ್ಯಾಯಾಲಯದಲ್ಲಿ ಬಾಣೆ ಜಾಗದ ಮಾಲೀಕತ್ವವನ್ನು ಘೋಷಿಸುವಂತಿಲ್ಲ, ಈ ಹಿಂದೆ ರಾಜ್ಯ ಉಚ್ಚ ನ್ಯಾಯಾಲಯವು ಚಕ್ಕೇರ ಕಾರ್ಯಪ್ಪ ಪ್ರಕರಣದಲ್ಲಿ ನೀಡಿರುವ ತೀರ್ಪಿನಂತೆ ಸಿವಿಲ್ ನ್ಯಾಯಾಲಯಕ್ಕೆ ಮಾಲೀಕತ್ವ ಘೋಷಿಸುವ ಅಧಿಕಾರ ಇರುವುದಿಲ್ಲ. ಅಲ್ಲದೆ, ಈ ಹಿಂದೆ ಮಚ್ಚೇಟಿರ ಮಾಚಯ್ಯ ಹಾಗೂ ನಂದಿನೆರವAಡ ಮೇದಪ್ಪ ಪ್ರಕರಣದಲ್ಲಿ ರಾಜ್ಯ ಉಚ್ಚ ನ್ಯಾಯಾಲಯವು ನೀಡಿರುವ ತೀರ್ಪನ್ನು ಪ್ರಸ್ತಾಪಿಸಿದರು.

ವೀರಾಜಪೇಟೆ ನ್ಯಾಯಾಲಯವು ನೀಡಿದ ತೀರ್ಪನ್ನು ರದ್ದುಗೊಳಿಸ ಬೇಕು ಎಂದು ವಾದಿಸಿದ್ದರು. ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ವಿ. ಶ್ರೀಶಾನಂದ ಅವರು ಈ ಬಗ್ಗೆ ಕೂಲಂಕುಶವಾಗಿ ಬಾಣೆ ಜಾಗದ ಬಗ್ಗೆ ಈ ಹಿಂದೆ ಬಂದಿರುವ ಎಲ್ಲಾ ತೀರ್ಪನ್ನು ಪರಿಗಣಿಸಿ ವಾದ-ವಿವಾದ ಆಲಿಸಿದ್ದರು, ಎದುರುದಾರ ಪಲೆಯಂಡ ಮಧುಕುಮಾರ್ ಅವರ ವಕೀಲರು ನ್ಯಾಯಾಲಯಕ್ಕೆ ಮನವಿಯೊಂದನ್ನು ಸಲ್ಲಿಸಿ ಈ ಹಿಂದಿನ ಉಚ್ಚ ನ್ಯಾಯಾಲಯದ ತೀರ್ಪಿನಂತೆ ಮಾಲೀಕತ್ವ ಘೋಷಿಸುವ ತಮ್ಮ ಮನವಿಯನ್ನು ವಾಪಸ್ಸು ತೆಗೆದುಕೊಂಡರೂ ಸಹ ರಾಜ್ಯ ಉಚ್ಚ ನ್ಯಾಯಾಲಯವು ಪ್ರಕರಣವನ್ನು ಕೂಲಂಕುಶವಾಗಿ ಪರಿಗಣಿಸಿ, ಹಿರಿಯ ವಕೀಲರಾದ ಎನ್. ರವೀಂದ್ರನಾಥ್ ಕಾಮತ್ ರವರ ವಾದವನ್ನು ಹಾಗೂ ಅವರು ಸಲ್ಲಿಸಿದ ಈ ಹಿಂದಿನ ಎಲ್ಲಾ ತೀರ್ಪುಗಳನ್ನು ಪರಿಗಣಿಸಿದರು. ಅವರ ವಾದದಂತೆ ಪಲೆಯಂಡ ಮಧುಕುಮಾರ್ ಅವರು ಆಸ್ತಿಯ ವಿಭಾಗಕ್ಕೆ ದಾವೆ ಹೂಡಬಹುದಿತ್ತು. ಆದರೆ ಬಾಣೆ ಜಾಗದ ಮಾಲೀಕತ್ವ ಘೋಷಿಸಲು ಹಾಕಿದ ದಾವೆಯನ್ನು ವಜಾ ಗೊಳಿಸಬೇಕು ಎಂದು ಮಂಡಿಸಿದ ವಾದವನ್ನು ಪರಿಗಣಿಸಿ ಸರ್ಕಾರದ ಹಾಗೂ ಮಧುಕುಮಾರ್ ರವರ ವಕೀಲರ ವಾದವನ್ನು ಸಹ ಪರಿಗಣಿಸಿ ವೀರಾಜಪೇಟೆ

(ಮೊದಲ ಪುಟದಿಂದ) ಸಿವಿಲ್ ನ್ಯಾಯಾಲಯದಲ್ಲಿ ಬಾಣೆ ಜಾಗದ ಮಾಲೀಕತ್ವವನ್ನು ಘೋಷಿಸಿದ ಆದೇಶವನ್ನು ರದ್ದು ಪಡಿಸಿರುತ್ತಾರೆ. ಅಲ್ಲದೆ, ಶಾಶ್ವತ ಪ್ರತಿಬಂಧಕ ಆದೇಶವು ಮಧುಕುಮಾರ್ ಅವರು ಪಲೆಯಂಡ ಕುಟುಂಬದ ಆಸ್ತಿಯ ವಿಭಾಗಕ್ಕಾಗಿ ದಾವೆ ಹಾಕುವವರೆಗೆ ಮಾತ್ರ ಚಾಲ್ತಿಯಲ್ಲಿರುವಂತೆ ಆದೇಶಿಸಿರುತ್ತಾರೆ.

ಈ ಮಹತ್ವದ ಆದೇಶದಿಂದಾಗಿ ಕೊಡಗು ಜಿಲ್ಲೆಯ ಬಾಣೆ ಜಾಗದ ಮಾಲೀಕತ್ವ ಘೋಷಿಸುವಂತೆ ಹಾಕಿರುವ ಎಲ್ಲಾ ದಾವೆಗಳು ವಜಾ ಆಗುವಂತಹ ಸಂಭವ ಇರುತ್ತದೆ. ಈ ಬಗ್ಗೆ ‘ಶಕ್ತಿ’ ಪರವಾಗಿ ರಾಜ್ಯ ಉಚ್ಚ ನ್ಯಾಯಾಲಯದ ಹಿರಿಯ ವಕೀಲರಾದ ಎನ್. ರವೀಂದ್ರನಾಥ್ ಕಾಮತ್ ಅವರನ್ನು ಸಂಪರ್ಕಿಸಿದಾಗ ಬಾಣೆ ಜಾಗದ ತೀರ್ಪು ಇಲ್ಲಿಯವರೆಗೆ ಸರ್ಕಾರದ ಪರವಾಗಿಯೇ ಇದೆ. ಮಾಲೀಕತ್ವ ಹಿಡುವಳಿದಾರರ ಪರವಾಗಿ ಇರುವುದಿಲ್ಲ, ಆದ್ದರಿಂದ ಈ ಬಗ್ಗೆ ಸರ್ಕಾರವೇ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ. ಈ ಒಂದು ಸಮಸ್ಯೆಯಿಂದ ಬಾಣೆ ಜಮೀನಿನ ಮರದ ಮಾಲೀಕತ್ವದ ಸಮಸ್ಯೆ ಇನ್ನೂ ಇತ್ಯರ್ಥವಾಗಿರುವುದಿಲ್ಲ.

ಕೊಡಗು ಜಿಲ್ಲೆಯ ಜನನಾಯಕರು, ರಾಜಕಾರಣಿಗಳು, ಬಾಣೆ ಹಿಡುವಳಿದಾರರು ಈ ಬಗ್ಗೆ ಸರ್ಕಾರದೊಡನೆ ಚರ್ಚಿಸಿ ಸೂಕ್ತ ಪರಿಹಾರ ಪಡೆದುಕೊಳ್ಳುವಂತೆ ಆಗಬೇಕು. ಇಲ್ಲದಿದ್ದಲ್ಲಿ ಮುಂದೆ ಯಾವುದಾದರೂ ಉದ್ದೇಶಕ್ಕೆ ಬಾಣೆ ಜಾಗವನ್ನು ಸರ್ಕಾರವು ಸ್ವಾಧೀನ ಪಡಿಸುವ ಪ್ರಕ್ರಿಯೆ ಪ್ರಾರಂಭಿಸಿದರೆ ಪರಿಹಾರ ಸಿಗದೆ ಇರುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ಪಟ್ಟಿರುತ್ತಾರೆ. ಪಲೆಯಂಡ ಕುಟುಂಬದ ಹಿರಿಯರಾದ ವೀರಾಜಪೇಟೆಯ ಹಿರಿಯ ವಕೀಲರಾಗಿದ್ದ ದಿ| ಪಲೆಯಂಡ ಕುಶಾಲಪ್ಪನವರ ಪುತ್ರ ಪಲೆಯಂಡ ಸುಬ್ಬಯ್ಯ ಅವರನ್ನು ಈ ಬಗ್ಗೆ ಸಂಪರ್ಕಿಸಿದಾಗ ಬಾಣೆ ಜಾಗದ ಬಗ್ಗೆ ಸರ್ಕಾರವು ಸೂಕ್ತವಾದ ಕಾನೂನು ತರಬೇಕಾಗಿಯೂ, ಕುಟುಂಬದಲ್ಲಿ ಕಡ್ಡಾಯವಾಗಿ ಬಾಣೆ ಜಾಗವು ಸರಿಸಮಾನವಾಗಿ ಪಾಲು ಆದಲ್ಲಿ ಸರ್ಕಾರವು ಇದಕ್ಕೆ ಮಾನ್ಯತೆ ನೀಡಿ ಮರದ ಹಕ್ಕನ್ನು ಹಿಡುವಳಿದಾರರಿಗೆ ಕೊಡಬೇಕಾಗಿಯೂ ಅಭಿಪ್ರಾಯಪಟ್ಟರು.