ಕುಶಾಲನಗರ, ಜ. ೧೯: ನಿಗದಿತ ಅವಧಿಯಲ್ಲಿ ಯಾವುದೇ ಕ್ಲಿಷ್ಟಕರ ಗುರಿಯನ್ನು ಸಾಧಿಸಬೇಕಾದಲ್ಲಿ ಕಠಿಣ ಪರಿಶ್ರಮದ ಅವಶ್ಯಕತೆ ಇದೆ ಎಂದು ಏಕಲವ್ಯ ಪ್ರಶಸ್ತಿ ವಿಜೇತ ಕ್ರೀಡಾಪಟು ಹಾಗೂ ಅಂತರರಾಷ್ಟಿçÃಯ ವ್ಯಕ್ತಿತ್ವ ವಿಕಸನ ತರಬೇತುದಾರ ಅರ್ಜುನ್ ದೇವಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಕೊಡಗು ವಿಕಸನ ಸಂಸ್ಥೆ ಆಶ್ರಯದಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಕುಶಾಲನಗರ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾದ ಪ್ರೇರಣಾ ಕಾರ್ಯಾಗಾರದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿದರು. ಪ್ರತಿಯೊಬ್ಬರೂ ಸಂಸ್ಕಾರ, ಸಂಸ್ಕೃತಿ ಮೈಗೂಡಿಸಿಕೊಳ್ಳಬೇಕು, ಸಂಸ್ಕಾರ ರಹಿತ ವ್ಯಕ್ತಿ ಅವನತಿಯತ್ತ ಸಾಗುವ ಅಪಾಯ ಇದೆ ಎಂದ ಅರ್ಜುನ್ ದೇವಯ್ಯ, ತಪ್ಪುಗಳನ್ನು ತಿದ್ದಿಕೊಂಡು ಹಸನಾದ ಬದುಕು ರೂಪಿಸಿಕೊಳ್ಳ ಬಹುದು ಎಂದರು. ಛಲದ ಮೂಲಕ ಜೀವನದ ಗುರಿ ಸಾಧನೆ ಸಾಧ್ಯ ಎಂದರು. ವಿವೇಕಾನಂದ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎನ್.ಎನ್. ಶಂಭು ಲಿಂಗಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಾಗಾರದಲ್ಲಿ ಸೋಮವಾರ ಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್, ಕೊಡಗು ವಿಕಸನ ಸಂಸ್ಥೆ ಪ್ರಮುಖರಾದ ಚೆಯ್ಯಂಡ ಸತ್ಯಗಣಪತಿ, ಕಿಶೋರ್ ರೈ ಕತ್ತಲೆಕಾಡು, ವಿವೇಕಾನಂದ ಪಿಯು ಕಾಲೇಜಿನ ಪ್ರಾಂಶುಪಾಲರಾದ ಕ್ಲಾರಾ ರೇಷ್ಮ ಮತ್ತಿತರರು ಉಪಸ್ಥಿತರಿದ್ದರು.