ಕುಶಾಲನಗರ, ಜ. ೧೯: ರಾಜ್ಯದಲ್ಲಿ ಬಿಜೆಪಿ ಈ ಬಾರಿ ೧ ಕೋಟಿ ನೂತನ ಸದಸ್ಯರನ್ನು ಸೇರ್ಪಡೆಗೊಳಿಸುವ ಗುರಿ ಹೊಂದಲಾಗಿದೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿಳಿಸಿದ್ದಾರೆ.
ಅವರು, ಕುಶಾಲನಗರ ಬಾಪೂಜಿ ಬಡಾವಣೆಯ ೧೬೯ನೇ ಬೂತ್ ವಿಜಯ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕಾರ್ಯಕರ್ತರು ೨ ಕೋಟಿ ಮನೆಗಳಿಗೆ ಕರಪತ್ರ ತಲುಪಿಸುವ ಕೆಲಸ ಮಾಡಲಿದ್ದಾರೆ. ಕಾರ್ಯಕರ್ತರ ಮನೆಗೆ ತೆರಳಿ ಬಿಜೆಪಿ ಧ್ವಜ ಹಾರಿಸುವುದು, ಚುನಾವಣೆ ಹತ್ತಿರ ಬಂದ ಹಿನ್ನೆಲೆಯಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸುವುದು, ಈ ಮೂಲಕ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಗದ್ದುಗೆ ಹಿಡಿಯಲು ರಾಜಕೀಯ ವಾತಾವರಣ ಸೃಷ್ಟಿಸಬೇಕಾಗಿದೆ ಎಂದರು.
ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಮಾತನಾಡಿ, ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಕೆಲಸವಾಗಬೇಕು.ಈ ಮೂಲಕ ಪಕ್ಷ ಬೆಳವಣಿಗೆ ಸಾಧ್ಯ ಎಂದರಲ್ಲದೇ ಬಿಜೆಪಿ ಏಳಿಗೆಗೆೆ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತ ಕೈಜೋಡಿಸಬೇಕು ಎಂದರು.
ಈ ಸಂದರ್ಭ ಬೂತ್ ಅಧ್ಯಕ್ಷ ಬೋಜಪ್ಪ, ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್, ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಮಂಡಲ ಅಧ್ಯಕ್ಷ ಮನು ಕುಮಾರ್ರೈ, ಶಕ್ತಿ ಕೇಂದ್ರದ ಪ್ರಮುಖರಾದ ಪ್ರವೀಣ್, ಪೃಥ್ವಿರಾಜ್, ಕಾರ್ಯದರ್ಶಿ ಆದರ್ಶ್, ಉಸ್ತುವಾರಿಗಳಾದ ಪ್ರಶಾಂತ್, ವೇದಾವತಿ, ಬೋಸ್ ಮೊಣ್ಣಪ್ಪ, ಅಮೃತ್ರಾಜ್, ಕೆ.ಜಿ. ಮನು, ವೈಶಾಕ್, ಅಶ್ವಿನ್, ಬಾಲಾಜಿ ಮತ್ತಿತರರು ಇದ್ದರು.