ಜನರ ವಿಕಾಸ ನಮ್ಮ ಮೂಲಮಂತ್ರ : ಪ್ರಧಾನಿ ಮೋದಿ
ಯಾದಗಿರಿ, ಜ. ೧೯: ನಾರಾಯಣಪುರ ಎಡದಂಡೆ ಕಾಲುವೆ ಯೋಜನೆಯ ಲೋಕಾರ್ಪಣೆ ಮಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆಗುತ್ತಿರುವ ಕೆಲಸಗಳ ಬಗ್ಗೆ ಶ್ಲಾಘನೀಯ ವ್ಯಕ್ತಪಡಿಸಿದರು. ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷಗಳಾಗಿವೆ. ಮುಂದಿನ ೨೫ ವರ್ಷಗಳ ಕನಸು ಹೊತ್ತು ನಾವು ಮುನ್ನಡೆಯುತ್ತಿದ್ದೇವೆ ಎಂದು ಹೇಳಿದರು. ಕಾಲುವೆ ಯೋಜನೆ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಇದು ನಮಗೆಲ್ಲರಿಗೂ ಅಮೃತ ಕಾಲ. ಈ ಅಮೃತ ಕಾಲದಲ್ಲಿ ನಾವು ವಿಕಸಿತ ಭಾರತವನ್ನು ನಿರ್ಮಿಸಬೇಕಿದೆ. ಭಾರತದ ಎಲ್ಲ ನಾಗರಿಕರಿಗೆ, ಕುಟುಂಬಗಳಿಗೆ, ರಾಜ್ಯಗಳು ಅಭಿಯಾನದ ಭಾಗವಾದಾಗ ಮಾತ್ರ ಭಾರತ ವಿಕಸಿತವಾಗಲಿದೆ. ರೈತರು, ಕಾರ್ಮಿಕರು ಮತ್ತು ಎಲ್ಲರ ಬದುಕು ಸುಧಾರಿಸಿದಾಗ ಮಾತ್ರ ಭಾರತ ವಿಕಸಿತವಾಗಲಿದೆ. ಕೃಷಿಯಲ್ಲಿ ಫಸಲು ಚೆನ್ನಾಗಿ ಬರಬೇಕು, ಕೈಗಾರಿಕೆಯಲ್ಲಿ ಉತ್ಪಾದನೆ ಚೆನ್ನಾಗಿ ಆಗಬೇಕು. ಆಗಷ್ಟೇ ಭಾರತ ವಿಕಸಿತವಾಗಲಿದೆ ಎಂದರು. ನಾವು ಎಂದಿಗೂ ವೋಟ್ಬ್ಯಾಂಕ್ ರಾಜಕಾರಣ ಮಾಡಲ್ಲ. ಅಭಿವೃದ್ಧಿಗೆ ಒತ್ತುಕೊಡುತ್ತೇವೆ. ಅಭಿವೃದ್ಧಿಯನ್ನೇ ಗಮನದಲ್ಲಿರಿಸಿಕೊಂಡು ರಾಜಕಾರಣ ಮಾಡುತ್ತೇವೆ. ವಿಕಾಸವೊಂದೇ ನಮ್ಮ ಮೂಲಮಂತ್ರ, ವೋಟ್ ಬ್ಯಾಂಕ್. ಯಾದರಿಗಿ ಸಹಿತವಾಗಿ ದೇಶದ ನೂರಾರು ಇಂಥ ಜಿಲ್ಲೆಗಳಲ್ಲಿ ಆಕಾಂಕ್ಷಿ ಜಿಲ್ಲೆ ಎನ್ನುವ ಹೊಸ ಕಾರ್ಯಕ್ರಮ ಆರಂಭಿಸಿದ್ದೇವೆ. ಆಹಾರ ಉದ್ಯಮಗಳಿಗೆ ಇಲ್ಲಿ ಉತ್ತೇಜನ ಸಿಗುತ್ತಿದೆ. ಭಾರತವು ಅಭಿವೃದ್ಧಿಹೊಂದಲು ರಕ್ಷಣೆ ಮತ್ತು ಆಂತರಿಕ ಭದ್ರತೆಯೊಂದಿಗೆ ಉತ್ತಮ ಆಡಳಿತವೂ ಅತ್ಯಗತ್ಯ. ಡಬಲ್ ಎಂಜಿನ್ ಸರ್ಕಾರವು ಈ ಆಶಯ ಈಡೇರಿಸುತ್ತಿದೆ. ನಾವು ಘೋಷಿಸಿದ್ದ ಹಲವು ಯೋಜನೆಗಳನ್ನು ಪೂರ್ಣಗೊಳಿಸಿದ್ದೇವೆ. ಹಳೆಯ ಯೋಜನೆಗಳನ್ನೂ ಅನುಷ್ಠಾನಕ್ಕೆ ತಂದಿದ್ದೇವೆ. ಕರ್ನಾಟಕದಲ್ಲಿ ಹಲವು ಹೊಸ ಯೋಜನೆಗಳು ನಡೆಯುತ್ತಿವೆ. ನದಿಗಳ ಜೋಡಣೆಯಿಂದ ಬರಪೀಡಿತ ಪ್ರದೇಶಗಳ ಸಮಸ್ಯೆ ಪರಿಹರಿಸಲು ಯತ್ನಿಸುತ್ತಿದ್ದೇವೆ ಎಂದರು.
‘ತೇಜಸ್ವಿ ಸೂರ್ಯ ವಿಮಾನದ ತುರ್ತು ಬಾಗಿಲು ತೆರೆದಿಲ್ಲ’
ಚಿಕ್ಕಮಗಳೂರು, ಜ. ೧೯: ಸಂಸದ ತೇಜಸ್ವಿ ಸೂರ್ಯ ವಿಮಾನದ ತುರ್ತು ನಿರ್ಗಮನದ ಬಾಗಿಲು ತೆರಿದಿಲ್ಲ, ಕ್ಷಮೆಯೂ ಯಾಚಿಸಿಲ್ಲ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಸ್ಪಷ್ಟಪಡಿಸಿದ್ದಾರೆ. ತೇಜಸ್ವಿ ಸೂರ್ಯ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಅಣ್ಣಾಮಲೈ ಕೂಡಾ ಇದ್ದರು ಎನ್ನಲಾಗಿದೆ. ನಗರದಲ್ಲಿ ತೇಜಸ್ವಿ ಸೂರ್ಯ ವಿರುದ್ಧದ ವಿವಾದ ಕುರಿತಂತೆ ಪ್ರತಿಕ್ರಿಯಿಸಿದ ಅಣ್ಣಾಮಲೈ, ಎಟಿಆರ್ -೭೨ ಸಣ್ಣ ವಿಮಾನದಲ್ಲಿ ತುರ್ತು ನಿರ್ಗಮನ ದ್ವಾರದ ಬದಿಯ ಸೀಟಿನಲ್ಲಿ ಸಂಸದ ತೇಜಸ್ವಿ ಸೂರ್ಯ ಕುಳಿತಿದ್ದರು. ಅವರು ಮಾತನಾಡುವಾಗ ಕೈ ಬಾಗಿಲಿಗೆ ತಗುಲಿದೆ. ತಕ್ಷಣವೇ ಗಗನಸಖಿಗೆ ವಿಷಯ ತಿಳಿಸಲಾಯಿತು. ಪೈಲಟ್ ಬಂದು ಪರಿಶೀಲಿಸಿದರು. ತೇಜಸ್ವಿ ಸೂರ್ಯ ವಿಮಾನದಲ್ಲಿ ತುರ್ತು ನಿರ್ಗಮನ ಬಾಗಿಲು ಎಳೆದಿಲ್ಲ. ಅವರು ಇದೆಲ್ಲವನ್ನು ಘಟನಾ ವಿವರದಲ್ಲಿ ಉಲ್ಲೇಖಿಸಿರುವುದಾಗಿ ತಿಳಿಸಿದರು. ಘಟನೆಯಲ್ಲಿ ತೇಜಸ್ವಿ ಅವರು ತಪ್ಪು ಮಾಡಿಲ್ಲ. ವಿಮಾನ ಒಂದು ಗಂಟೆ ತಡವಾಗಿದ್ದಕ್ಕೆ ಅವರು ಪ್ರಯಾಣಿಕರ ಕ್ಷಮೆಯಾಚಿಸಿದ್ದಾರೆ ಎಂದು ಅಣ್ಣಾಮಲೈ ಸಮರ್ಥಿಸಿಕೊಂಡರು.
ತಲೆ ಮರೆಸಿಕೊಂಡ ಆರೋಪಿಗಳ ಪತ್ತೆಗೆ ಬಹುಮಾನ ಘೋಷಣೆ
ಮಂಗಳೂರು, ಜ. ೧೯: ಬಿಜೆಪಿ ಯುವಮೋರ್ಚಾದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟಿçÃಯ ತನಿಖಾ ಸಂಸ್ಥೆ (ಎನ್ಐಎ) ಪ್ರರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಮತ್ತಿಬ್ಬರು ಆರೋಪಿಗಳ ಸುಳಿವು ನೀಡಿದವರಿಗೆ ನಗದು ಬಹುಮಾನ ನೀಡುವುದಾಗಿ ಘೋಷಿಸಿದೆ. ೨೦೨೨ರ ಜುಲೈ ೨೬ರಂದು ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಅವರ ಕೋಳಿ ಅಂಗಡಿಯ ಮುಂದೆಯೇ ದುಷ್ಕರ್ಮಿಗಳು ಪ್ರವೀಣ್ ನೆಟ್ಟಾರು ಅವರ ಹತ್ಯೆ ಮಾಡಿದ್ದರು. ಇದೀಗ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯ ಸದಸ್ಯರಾಗಿರುವ ಬಂಟ್ವಾಳ ತಾಲ್ಲೂಕಿನ ಕೊಡಾಜೆಯ ಮೊಹಮ್ಮದ್ ಶರೀಫ್ (೫೩) ಮತ್ತು ನೆಕ್ಕಿಲಾಡಿಯ ಕೆಎ ಮಸೂದ್ (೪೦) ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳಾಗಿದ್ದು, ಇವರಿಬ್ಬರ ಸುಳಿವು ನೀಡಿದರೆ ತಲಾ ೫ ಲಕ್ಷ ರೂ. ಬಹುಮಾನ ನೀಡುವುದಾಗಿ ಎನ್ಐಎ ಹೇಳಿದೆ. ಇವರಿಬ್ಬರ ಮಾಹಿತಿ ನೀಡುವವರನ್ನು ಗೌಪ್ಯವಾಗಿಡಲಾಗುವುದು ಎಂದೂ ಎನ್ಐಎ ತಿಳಿಸಿದೆ.
ರಾಜ್ಯದಲ್ಲಿ ಹೆಚ್ಚಿನ ಮೃಗಾಲಯಗಳ ಸ್ಥಾಪನೆಗೆ ಚಿಂತನೆ
ಮೈಸೂರು, ಜ. ೧೯: ಕಾಡುಪ್ರಾಣಿಗಳು ವಿನಾಶದ ಹಂತದಲ್ಲಿದ್ದು, ಈ ಹಿನ್ನೆಲೆಯಲ್ಲಿ ವನ್ಯಜೀವಿಗಳ ಮಹತ್ವ ಮತ್ತು ಅವುಗಳ ಸರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಕರ್ನಾಟಕ ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜವೇದ್ ಅಖ್ತರ್ ಹೇಳಿದ್ದಾರೆ. ಕೇಂದ್ರ ಮೃಗಾಲಯ ಪ್ರಾಧಿಕಾರ ಮತ್ತು ಮೈಸೂರು ಮೃಗಾಲಯ ಆಯೋಜಿಸಿದ್ದ ಮೃಗಾಲಯಗಳ ನಿರ್ದೇಶಕರ ರಾಷ್ಟಿçÃಯ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹೆಚ್ಚಿನ ಮೃಗಾಲಯಗಳ ಸ್ಥಾಪನೆಗೆ ಚಿಂತನೆ ನಡೆಸಲಾಗಿದೆ. ಈ ಮೃಗಾಲಯಗಳಿಗೆ ಅಗತ್ಯವಿರುವ ಸಂಪನ್ಮೂಲಗಳ ಒದಗಿಸುವಂತೆ ಕೇಂದ್ರ ಸರ್ಕಾರ ಹಾಗೂ ಕೇಂದ್ರ ಮೃಗಾಲಯ ಪ್ರಾಧಿಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.