ಕೂಡಿಗೆ, ಜ. ೧೮: ಕೂಡಿಗೆಯ ಸೈನಿಕ ಶಾಲೆ ವತಿಯಿಂದ ೨೦೨೨-೨೩ನೇ ಸಾಲಿನ ಅಖಿಲ ಭಾರತ ಸೈನಿಕ ಶಾಲೆಗಳ ಅಂತರ ವಲಯ ವಾಲಿಬಾಲ್ ಕ್ರೀಡಾಕೂಟ ಸೈನಿಕ ಶಾಲೆಯ ಕ್ರೀಡಾಂಗಣ ನಡೆಯಿತು. ಕ್ರೀಡಾಕೂಟದ ಉದ್ಘಾಟನೆಯನ್ನು ಸೈನಿಕ ಶಾಲೆಯ ಪ್ರಾಂಶುಪಾಲ ಕರ್ನಲ್ ಜಿ. ಕಣ್ಣನ್ ನೆರವೇರಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್. ಮೂರ್ತಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ನಿರಂತರ ಪ್ರಯತ್ನ, ಕ್ರೀಡಾ ಸ್ಪೂರ್ತಿ ಮತ್ತು ಸಾಂಘಿಕ ಹೋರಾಟವಿದ್ದರೆ ಯಾವುದೇ ಸ್ಪರ್ಧೆಯಾದರೂ ಗೆಲುವು ಸಾಧ್ಯವಾಗುತ್ತದೆ ಎಂದರು.
ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಸೈನಿಕ ಶಾಲೆ ಅಂಬಿಕಾಪುರ ಪಡೆದುಕೊಂಡಿತು. ದ್ವಿತೀಯ ಸ್ಥಾನವನ್ನು ಪಶ್ಚಿಮ ಬಂಗಾಳದ ಪುರ್ಲಿಯಾ ಸೈನಿಕ ಶಾಲೆ ತಂಡ ಪಡೆಯಿತು.
ಪ್ರಥಮ ಸ್ಥಾನವನ್ನು ಪಡೆದ ತಂಡಕ್ಕೆ ಅಖಿಲ ಭಾರತ ಸೈನಿಕ ಶಾಲೆಗಳ ಅಂತರ ವಲಯ ವಾಲಿಬಾಲ್ ಕ್ರೀಡೆಯ ಪ್ರತಿಷ್ಠಿತ ಪಾರಿತೋಷಕ, ಪ್ರಶಸ್ತಿ ಪತ್ರ, ಮತ್ತು ಬಂಗಾರದ ಪದಕಗಳನ್ನು ವಿತರಣೆ ಮಾಡಲಾಯಿತು.
ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ಬೆಳ್ಳಿ ಪದಕ, ಪಾರಿತೋಷಕ, ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಈ ಸಂದರ್ಭ ಶಾಲೆಯ ಪ್ರಬಾರ ಉಪ ಪ್ರಾಂಶು ಪಾಲ ಲೆಫ್ಟಿನೆಂಟ್ ಕರ್ನಲ್ ಅಜಿತ್ ಸಿಂಗ್, ಹಿರಿಯ ಶಿಕ್ಷಕ ಗೋವಿಂದ ರಾಜು, ಕ್ರೀಡಾ ವಿಭಾಗದ ಮೇಲ್ವಿಚಾರಕ, ಜಿ.ಕೆ. ಮಂಜಪ್ಪ, ದೈಹಿಕ ಶಿಕ್ಷಕರಾದ ಹೆಚ್.ಎಂ. ರನೀಶ್, ಸಿ.ಹೆಚ್. ಸ್ವಾಲಿನ್ ಸೇರಿ ದಂತೆ ಶಾಲಾ ನಿರ್ವಾಹಕರು, ಕ್ರೀಡಾ ಪಟುಗಳು, ಬೋಧಕ ವರ್ಗದವರು ವಿದ್ಯಾರ್ಥಿಗಳು ಹಾಜರಿದ್ದರು.