ಕುಶಾಲನಗರ, ಜ. ೧೮: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕುಶಾಲನಗರ ತಾಲೂಕು ಘಟಕದ ವತಿಯಿಂದ ಜಂಟಿಯಾಗಿ ಸ್ಥಳೀಯ ಕನ್ನಡ ಭಾರತಿ ಪದವಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಗಲಿದ ಮಹಿಳಾ ಸಾಹಿತಿ ಸಾರಾ ಅಬೂಬಕರ್ ಅವರಿಗೆ ನುಡಿ ನಮನ ಸಲ್ಲಿಸಲಾಯಿತು.
ಕುಶಾಲನಗರದ ಕನ್ನಡ ಭಾರತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಸಾರಾ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಜಿಲ್ಲಾ ಕ.ಸಾ.ಪ. ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ನಾಡಿನ ಸಾಹಿತ್ಯ ವಲಯದಲ್ಲಿ ಹೆಸರು ಮಾಡಿದ ಅಲ್ಪಸಂಖ್ಯಾತ ಸಮುದಾಯದ ಮಹಿಳೆ ಸಾರಾ ಅಬೂಬಕರ್ ೫ ದಶಕಗಳ ಕಾಲ ಸಾಹಿತ್ಯ ಕೃಷಿ ಮಾಡುವ ಮೂಲಕ ಕರಾವಳಿ ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದರು. ಇದೇ ಸಂದರ್ಭ ಮಾತನಾಡಿದ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್, ೧೯೮೦ ರ ದಶಕದಲ್ಲಿ ಮಸಲ್ಮಾನ ಸಮುದಾಯದೊಳಗಿದ್ದ ಕೆಲವು ಕಟ್ಟುಪಾಡುಗಳು ಹಾಗೂ ಮುಸ್ಲಿಂ ಸಂವೇದನೆಗಳ ತೊಳಲಾಟಗಳು ಹಾಗೂ ಮಾನಸಿಕ ತುಮುಲಗಳ ಬಗ್ಗೆ ಸಾರಾ ಮಾಡಿರುವ ಸಾಹಿತ್ಯ ಕೃಷಿ ವಿಭಿನ್ನವಾಗಿದೆ ಎಂದರು.
ಮಲೆಯಾಳಿ ಭಾಷಿಗರಾದರೂ ಕೂಡ ಕನ್ನಡದಲ್ಲಿ ತಾವು ಅನುಭವಿಸಿದ ತಲ್ಲಣಗಳನ್ನು ಬರಹದ ಮೂಲಕ ವ್ಯಕ್ತಪಡಿಸಿ ಸಾಹಿತ್ಯ ಕ್ಷೇತ್ರದ ನಕ್ಷತ್ರವಾಗಿದ್ದಾರೆ ಎಂದು ಶಶಿಧರ್ ಬಣ್ಣಿಸಿದರು. ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ, ಹೆಬ್ಬಾಲೆ ಹೋಬಳಿ ಅಧ್ಯಕ್ಷ ಮಣಜೂರು ಮೂರ್ತಿ, ಮಹಿಳಾ ಸಾಹಿತಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ಕನ್ನಡ ಭಾರತಿ ವಿದ್ಯಾಸಂಸ್ಥೆಯ ಪಿಯು ವಿಭಾಗದ ಪ್ರಾಂಶುಪಾಲ ಎಸ್.ಟಿ. ಪುರುಷೋತ್ತಮ, ಪದವಿ ವಿಭಾಗದ ಪ್ರಾಂಶುಪಾಲ ರುದ್ರಾಚಾರಿ, ಕಸಾಪ ತಾಲೂಕು ಕೋಶಾಧಿಕಾರಿ ಕೆ.ವಿ. ಉಮೇಶ್, ನಿರ್ದೇಶಕ ಎಂ.ಎನ್. ಕಾಳಪ್ಪ ಇದ್ದರು.