ಕುಶಾಲನಗರ, ಜ. ೧೭: ಕೂಡಿಗೆ ಗ್ರಾಮ ಪಂಚಾಯಿತಿಯಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆಯುತ್ತಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕೆಂದು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಎಸ್. ಕಾಂತರಾಜು ಒತ್ತಾಯಿಸಿದ್ದಾರೆ.
ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿ ಮರೆತು ಸ್ವಾರ್ಥ ಸಾಧನೆಯ ದುರುದ್ದೇಶದಿಂದ ಅಭಿವೃದ್ಧಿಯ ನೆಪದಲ್ಲಿ ಗುತ್ತಿಗೆದಾರರೊಂದಿಗೆ ಶಾಮಿಲಾಗಿ ಸರ್ಕಾರದ ಅನುದಾನವನ್ನು ಉದ್ಯೋಗ ಖಾತ್ರಿ ಹೆಸರಿನಲ್ಲಿ ತಮ್ಮ ಕುಟುಂಬ ಸದಸ್ಯರ ಖಾತೆಗೆ ಹಾಕಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದಾರೆ ಎಂದು ಆರೋಪ ವ್ಯಕ್ತಪಡಿಸಿದ್ದಾರೆ.
ಕೂಡಿಗೆ ಗ್ರಾಮ ಪಂಚಾಯಿತಿ ಕಾಮಗಾರಿಗಳ ಬಗ್ಗೆ ಕೆಲವು ಸಾರ್ವಜನಿಕರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವ ಹಣಾಧಿಕಾರಿಗಳಿಗೆ ದಾಖಲೆ ಸಹಿತ ದೂರು ನೀಡಿದ್ದಾರೆ. ಕ್ಷೇತ್ರದ ಶಾಸಕರು ಕೂಡ ಈ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಮಾಹಿತಿ ಲಭ್ಯವಾಗಿದೆ ಎಂದರು.
ಗ್ರಾಮ ಪಂಚಾಯಿತಿಯಲ್ಲಿ ಕೆಲವು ಸದಸ್ಯರು ಮಹಿಳಾ ಅಧ್ಯಕ್ಷರಿಗೆ ಕನಿಷ್ಟ ಗೌರವ ನೀಡದೇ ಏಕವಚನದಲ್ಲಿ ನಿಂದಿಸುತ್ತಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪಂಚಾಯಿತಿ ಅಧ್ಯಕ್ಷರು ಸಭೆಯಲ್ಲಿ ನಡೆದ ಘಟನೆ ಬಗ್ಗೆ ದೂರು ನೀಡಿರುವುದು ಸರಿಯಲ್ಲ ಎಂದು ತಿಳಿಸಿದ ಕಾಂತರಾಜು, ಈ ಪ್ರಕರಣಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲದೆ ಕೆಲವು ಸದಸ್ಯರಿಗೆ ಬೆಂಬಲ ನೀಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಅವರಿಗೆ ಹೇಳಿಕೆ ನೀಡಲು ಯಾವುದೇ ರೀತಿಯ ನೈತಿಕತೆ ಇಲ್ಲ ಎಂದು ಹೇಳಿದರು. ಈ ಹಿಂದೆ ಜಿಲ್ಲಾ ಪಂಚಾಯಿತಿಯಲ್ಲಿ ವಿ.ಪಿ. ಶಶಿಧರ್ ಅಧಿಕಾರದಲ್ಲಿದ್ದಾಗ ಅವರ ಮೇಲೆ ಅಂದಿನ ಅಧ್ಯಕ್ಷರಾಗಿದ್ದ ರಾಜರಾವ್, ಜಾತಿ ನಿಂದನೆ ಕೇಸ್ ದಾಖಲು ಮಾಡಿದ್ದ ಬಗ್ಗೆ ನೆನಪಿಸಿದರು. ಅದನ್ನು ಸುಳ್ಳು, ಜಾತಿ ನಿಂದನೆ ಎಂದು ಹೇಳಿರುವ ವಿ.ಪಿ. ಶಶಿಧರ್, ಇದೀಗ ರಾಜರಾವ್ ಪುತ್ರನ ಪರವಾಗಿ ಜಾತಿ ನಿಂದನೆ ಕೇಸ್ ಅನ್ನು ಬೆಂಬಲಿಸುತ್ತಿರುವುದು ಅಪಹಾಸ್ಯದ ವಿಷಯವಾಗಿದೆ ಎಂದು ಲೇವಡಿ ಮಾಡಿದರು. ಶಶಿಧರ್ ಅವರು, ಪತ್ರಿಕಾ ಹೇಳಿಕೆಯಲ್ಲಿ ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಬಗ್ಗೆ ಅನಾವಶ್ಯಕ ಹೇಳಿಕೆಗಳನ್ನು ಖಂಡಿಸುವುದಾಗಿ ಕಾಂತರಾಜು ಹೇಳಿದರು. ಅಧಿಕಾರ ಮತ್ತು ಕಾನೂನು ದುರುಪಯೋಗ ಮಾಡುವ ಜನರನ್ನು ಜೊತೆಗೆ ಕೂರಿಸಿಕೊಂಡು ನೈತಿಕತೆ ಅರಾಜಕತೆ ಬಗ್ಗೆ ಮಾತನಾಡಿದರೆ ಶಶಿಧರ್ ಅವರ ಶೋಭೆಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಹೇಳಿದರು. ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳಪೆ ಕಾಮಗಾರಿ ಮತ್ತು ದುರುಪಯೋಗ ಮಾಡುವುದರೊಂದಿಗೆ ಒಂದಿಬ್ಬರು ಸದಸ್ಯರು ಗ್ರಾಮ ಪಂಚಾಯಿತಿಯನ್ನು ಬ್ಯಾಂಕ್ ಎಟಿಎಂತರಹ ಬಳಸುತ್ತಿದ್ದಾರೆ. ಇದನ್ನು ವಿರೋಧಿಸಿದ ಪಂಚಾಯಿತಿ ಅಧ್ಯಕ್ಷರು ಮತ್ತು ಅವರ ಪತಿ ಮೇಲೆ ದೌರ್ಜನ್ಯ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಗೋಷ್ಠಿಯಲ್ಲಿ ಕೂಡಿಗೆ ರೈತ ಸಂಘದ ಪದಾಧಿಕಾರಿ ದಾಮೋದರ್, ಬಿಜೆಪಿ ಕಾರ್ಯಕರ್ತ ಕೆ.ಬಿ. ಪ್ರಕಾಶ್ ಇದ್ದರು.