ಸೋಮವಾರಪೇಟೆ, ಜ.೧೭: ಸಮೀಪದ ಶಾಂತಳ್ಳಿ ಶ್ರೀಕುಮಾರಲಿಂಗೇಶ್ವರ ಸ್ವಾಮಿಯ ೬೪ನೇ ಜಾತ್ರೋತ್ಸವ ಅಂಗವಾಗಿ ಶ್ರೀ ಕುಮಾರಲಿಂಗೇಶ್ವರ ಯುವಕ ಸಂಘದ ವತಿಯಿಂದ ಆಯೋಜಿಸಿದ್ದ ಅಂತರ್ ಜಿಲ್ಲಾ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾವಳಿಗೆ ಒಕ್ಕಲಿಗರ ಯುವ ವೇದಿಕೆ ಜಿಲ್ಲಾಧ್ಯಕ್ಷ ಗಿರೀಶ್ ಮಲ್ಲಪ್ಪ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಗ್ರಾಮೀಣ ಕ್ರೀಡಾಕೂಟಗಳಿಗೆ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ. ಗ್ರಾಮಾಂತರ ಪ್ರದೇಶದಲ್ಲಿ ಹಲವಷ್ಟು ಕ್ರೀಡಾ ಪ್ರತಿಭೆಗಳಿದ್ದು, ಸೂಕ್ತ ಅವಕಾಶ ಮತ್ತು ಪ್ರೋತ್ಸಾಹದ ಕೊರತೆಯಿಂದ ತೆರೆಮರೆಗೆ ಸರಿದಿವೆ. ಇಂತಹ ಕ್ರೀಡಾಕೂಟಗಳು ಪ್ರತಿಭೆಗಳನ್ನು ಗುರುತಿಸಲು ಸಹಕಾರಿಯಾಗಿವೆ ಎಂದರು.
ಈ ಸಂದರ್ಭ ಯುವ ವೇದಿಕೆಯ ಪದಾಧಿಕಾರಿಗಳಾದ ಗೌಡಳ್ಳಿ ಪೃಥ್ವಿ, ಮಡಿಕೇರಿಯ ಧನಂಜಯ್, ಕುಮಾರಲಿಂಗೇಶ್ವರ ಯುವಕ ಸಂಘದ ಅಧ್ಯಕ್ಷ ಸಜನ್ ಮಂದಣ್ಣ, ವಿಜಯಕುಮಾರ್, ಪ್ರೇಮ್ಸಾಗರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.