ಚೆಟ್ಟಳ್ಳಿ, ಜ. ೧೮: ಕುಶಾಲನಗರ ತಾಲೂಕು ವೆಂಕಟೇಶ್ವರ ಸೇವಾ ಸಮಿತಿಯ ೯ನೇ ವರ್ಷದ ವಾರ್ಷಿಕೋತ್ಸವವು ಸಮಿತಿಯ ಅಧ್ಯಕ್ಷ ಹೆಚ್.ಬಿ. ರಮೇಶ್ ಅವರ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಕುಶಾಲನಗರ ಪುರಸಭೆಯ ಅಧ್ಯಕ್ಷ ಜಯವರ್ಧನ್, ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರು ಹಾಗೂ ಪುರಸಭೆಯ ಕೌನ್ಸಿಲರ್ ಎಂ.ಬಿ. ಸುರೇಶ್, ಮಾರುತಿ ಬಡಾವಣೆಯ ಅಧ್ಯಕ್ಷ ಗಣೇಶ್ ಮತ್ತು ಪಟೇಲ್ ಬಡಾವಣೆಯ ಅಧ್ಯಕ್ಷ ಸಂತೋಷ್, ಜಾಗದ ಮಾಲೀಕ ಸುನಂದ, ಗುರುಕುಲ ಎಜುಕೇಷನ್ ಟ್ರಸ್ಟ್ನ ಕುಮಾರ್ ಮತ್ತು ವೆಂಕಟೇಶ್ವರ ಸೇವಾ ಸಮಿತಿಯ ಮಾಜಿ ಅಧ್ಯಕ್ಷ ಪದ್ಮನಾಭ ವೆಂಕಟೇಶ್ವರ ಸೇವಾ ಬಳಗದ ಕಾರ್ಯದರ್ಶಿ, ನಿರ್ದೇಶಕರುಗಳು ಮತ್ತು ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಮೊದಲಿಗೆ ಮಂಜು ಭಾರ್ಗವಿ ಮತ್ತು ಮಾಲಾಮೂರ್ತಿ ಪ್ರಾರ್ಥಿಸಿದರು. ಸದಸ್ಯ ಹನುಮೇಶ್ ಸ್ವಾಗತಿಸಿದರು, ಸಮಿತಿಯ ಸದಸ್ಯರು ನಾಡಗೀತೆ ರೈತಗೀತೆ ಹಾಡಿದರು. ಸದಸ್ಯ ಕೆ. ಮೂರ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸದಸ್ಯ ಶಶಿಕುಮಾರ್ ಬಿನ್ನವತ್ತಳೆ ವಾಚಿಸಿದರು. ಕಾರ್ಯದರ್ಶಿ ಹಿಂದಿನ ಸಾಲಿನ ವರದಿ ವಾಚಿಸಿದರು. ಉದ್ಘಾಟನಾ ನುಡಿಗಳನ್ನಾಡುತ್ತಾ ಶಿವಾನಂದ ಅವರು ಪುರಸಭೆಯ ಜೊತೆಗೂಡಿ ಬಡಾವಣೆಯ ಅಭಿವೃದ್ಧಿ ಕಾರ್ಯವನ್ನು ಮಾಡುವುದಾಗಿ ಭರವಸೆಕೊಟ್ಟರು.

ಸಮಿತಿಯ ಅಹವಾಲು ಮತ್ತು ಬೇಡಿಕೆಗಳಿಗೆ ಪುರಸಭೆಯ ಪರವಾಗಿ ಅಧ್ಯಕ್ಷ ಜಯವರ್ಧನ್ ಮತ್ತು ಕೌನ್ಸಿಲರ್ ಸುರೇಶ್ ಉತ್ತರಿಸಿದರು. ಬಡಾವಣೆಯ ಅಭಿವೃದ್ಧಿ ಮೂಲಭೂತ ಸೌಕರ್ಯಗಳ ಕುರಿತು ಮಾತನಾಡುತ್ತಾ ಇದು ಮಾದರಿ ಬಡಾವಣೆಯಾಗಬೇಕು ಎಂದು ಸುನಂದ ಮಾತನಾಡಿದರು.

ಮಾಲಾಮೂರ್ತಿ ಕಾರ್ಯಕ್ರಮವನ್ನು ನಿರೂಪಿಸಿದರು. ಸದಸ್ಯ ಸಣ್ಣಸ್ವಾಮಿ ವಂದಿಸಿದರು. ಬೆಳಗಿನಿಂದ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ವಯೋಮಾನವಾರು ಹಮ್ಮಿಕೊಳ್ಳಲಾಗಿತ್ತು. ಕ್ರೀಡಾ ಕಾರ್ಯಕ್ರಮದ ನಿರ್ವಹಣೆಯನ್ನು ಬಡಾವಣೆಯ ದೈಹಿಕ ಶಿಕ್ಷಕ ನಂದರವರು ನಿರ್ವಹಿಸಿದರು. ಸಂಜೆ ಮಕ್ಕಳು ಮಹಿಳೆಯರಿಂದ ನೃತ್ಯ ಗಾಯನ ಸೇರಿದಂತೆ ಪುರುಷರ ಹಾಸ್ಯನಗೆ ನಾಟಕಗಳು ಎಲ್ಲರ ಮನರಂಜಿಸಿದವು.