ಕೊಡ್ಲಿಪೇಟೆ, ಜ. ೧೬: ಮುಂದಿನ ಶೈಕ್ಷಣಿಕ ವರ್ಷದಿಂದ ಕೊಡ್ಲಿಪೇಟೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪಿಯುಸಿ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿದ್ದು, ಕಟ್ಟಡ ನಿರ್ಮಾಣಕ್ಕಾಗಿ ೧.೫೦ ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.

ಸಮೀಪದ ಬೆಸೂರು ಕೆರೆಕೇರಿ ಗ್ರಾಮದ ಅರೆಹಳ್ಳಿಯಲ್ಲಿ ಆಯೋಜಿಸಿದ್ದ ಬಿಜೆಪಿ ಸಾಧನಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೂಲಭೂತ ಅವಶ್ಯಕತೆಯಾಗಿರುವ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಈ ಹಿನ್ನೆಲೆ ಕೊಡ್ಲಿಪೇಟೆಯಲ್ಲಿ ಈಗಾಗಲೇ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಕಾಲೇಜು ಶಿಕ್ಷಣ ನೀಡಲು ಚಿಂತನೆ ನಡೆಸಲಾಗಿದೆ ಎಂದರು.

ಪಿಯುಸಿ ಶಿಕ್ಷಣ ನೀಡುವ ಉದ್ದೇಶದಿಂದ ಈಗಾಗಲೇ ಕಟ್ಟಡ ನಿರ್ಮಾಣಕ್ಕಾಗಿ ೧.೫೦ ಕೋಟಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ. ವಿದ್ಯಾರ್ಥಿಗಳ ದಾಖಲಾತಿ ನೋಡಿಕೊಂಡು ಕಾಲೇಜು ವ್ಯವಸ್ಥೆಯ ರೂಪುರೇಷೆ ಸಿದ್ದಪಡಿಸುವುದಾಗಿ ರಂಜನ್ ತಿಳಿಸಿದರು.ಮಡಿಕೇರಿ ಕ್ಷೇತ್ರದಲ್ಲಿ ೭,೫೦೦ ಮಂದಿಗೆ ೯೪ ಸಿ ಮತ್ತು ೯೪ ಸಿಸಿ ಅಡಿಯಲ್ಲಿ ಹಕ್ಕುಪತ್ರ ವಿತರಿಸಲಾಗಿದೆ. ೧೨,೦೦೦ ಮಂದಿಗೆ ಅಕ್ರಮ ಸಕ್ರಮ ಯೋಜನೆಯಡಿ ಜಾಗಕ್ಕೆ ಹಕ್ಕುಪತ್ರ ನೀಡಲಾಗಿದೆ. ಅಕಾಲಿಕ ಮಳೆಯಿಂದ ಬೆಳೆಹಾನಿಯಾದ ರೈತರಿಗೆ ೧೧೩ ಕೋಟಿ ಪರಿಹಾರ ವಿತರಿಸಲಾಗಿದೆ. ರೈತ ಸಮ್ಮಾನ್ ಯೋಜನೆಯಡಿ ಪ್ರತಿ ರೈತ ಕುಟುಂಬಕ್ಕೆ ವಾರ್ಷಿಕ ೧೦ ಸಾವಿರ ಪ್ರೋತ್ಸಾಹ ಹಣ ವಿತರಿಸಲಾಗುತ್ತಿದೆ. ಉಜ್ವಲ ಯೋಜನೆಯಡಿ ೧೦ ಕೋಟಿ ಮಹಿಳೆಯರಿಗೆ ಉಚಿತ ಅಡುಗೆ ಅನಿಲ ವಿತರಿಸಲಾಗಿದೆ. ಹೆಣ್ಣುಮಕ್ಕಳಿಗೆ ಭಾಗ್ಯಲಕ್ಷಿö್ಮÃ ಯೋಜನೆ ಜಾರಿಗೆ ತರಲಾಗಿದೆ. ಆ ಮೂಲಕ ಬಿಜೆಪಿ ಎಲ್ಲಾ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಕಾರ್ಯ ಮಾಡುತ್ತಿದೆ ಎಂದರು.

ಅರೆಹಳ್ಳಿ ಗ್ರಾಮದ ಶಿವನಂದೀಶ್ವರ ದೇವಾಲಯದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ರೂ. ೫ ಲಕ್ಷ ಅನುದಾನ ನೀಡಲಾಗುವುದು. ದೇವಾಲಯಗಳು ಗ್ರಾಮದ ಸುಭೀಕ್ಷೆ ಹಾಗೂ ನೆಮ್ಮದಿಯ ಸಂಕೇತವಾಗಿದ್ದು, ಧಾರ್ಮಿಕತೆಯ ತಳಹದಿಯಲ್ಲಿ ಸಮಾಜ ಸಾಗಬೇಕು ಎಂದು ಅಭಿಪ್ರಾಯಿಸಿದರು.

ಜನಪ್ರತಿನಿಧಿಗಳು ಚುನಾವಣೆ ಸಂದರ್ಭ ಮಾತ್ರ ರಾಜಕೀಯ ಮಾಡಬೇಕು. ನಂತರ ಕ್ಷೇತ್ರದ ಜನರೆಲ್ಲರೂ ಒಂದೇ ಎಂಬ ಭಾವನೆಯಿಂದ ಸಾಮಾಜಿಕ ಸೇವೆ ಕೈಗೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮದ ಪಟೇಲರಾದ ಕೆ.ಬಿ. ವೀರಪ್ಪ ವಹಿಸಿದ್ದರು. ಪ್ರಮುಖರಾದ ರೇಣುಕಪ್ಪ, ವೀರಭದ್ರಪ್ಪ, ಬಾಬು ರಾಜೇಂದ್ರ ಪ್ರಸಾದ್, ನಾಗರಾಜ್, ಪಾಲಾಕ್ಷ, ಮಹೇಶ್, ಯೋಗಪ್ಪ ಮಾಸ್ಟರ್, ಭಗವಾನ್, ಜಗದೀಶ್, ಮಳಲಿ ನಾಗೇಶ್, ಸುಮಾ ಸುದೀಪ್, ಲಾವಣ್ಯ ಮಹೇಶ್, ಕೆ.ಜಿ. ದಿನೇಶ್, ಎಸ್. ಮಹೇಶ್, ನಿವೃತ್ತ ಸೈನಿಕ ಪ್ರಸನ್ನ ಸೇರಿದಂತೆ ಇತರರು ಉಪಸ್ಥಿತರಿದ್ದರು.