ಕುಶಾಲನಗರ, ಜ. ೧೬: ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಫೆ. ೩ ರಂದು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕುಶಾಲನಗರದಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಹೇಳಿದರು.
ಕುಶಾಲನಗರದ ತಾಲೂಕು ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕುಶಾಲನಗರದ ರೈತ ಸಹಕಾರ ಭವನದಲ್ಲಿ ತಾಲೂಕು ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ.
ಇದರ ಅಂಗವಾಗಿ ಕೊಡಗು-ಮೈಸೂರು ಗಡಿಭಾಗದ ಕಾವೇರಿ ನದಿ ದಂಡೆಯಿAದ ಸಮ್ಮೇಳನದ ಮೆರವಣಿಗೆ ನಡೆಯಲಿದೆ. ಮೆರವಣಿಗೆ ಯಲ್ಲಿ ವಿವಿಧ ಕಲಾ ತಂಡಗಳು ಪಾಲ್ಗೊಳ್ಳಲಿವೆ ಎಂದು ತಿಳಿಸಿದ ಅವರು ತಾಲೂಕು ಸಮ್ಮೇಳನವನ್ನು ಹಬ್ಬದ ರೀತಿಯಲ್ಲಿ ಆಚರಿಸುವಂತಾಗ ಬೇಕೆಂದು ಕೋರಿದರು. ತಾಲೂಕು ಅಧ್ಯಕ್ಷ ಕೆ.ಎಸ್.ಮೂರ್ತಿ ಮಾತನಾಡಿ, ಸಮ್ಮೇಳನದಲ್ಲಿ ಕುಶಾಲನಗರ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಿಂದ ಸಾರ್ವಜನಿಕರು ಹೆಚ್ವಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ತಾಲೂಕಿನ ಹಬ್ಬವಾಗಿಸಲು ಸಹಕಾರ ನೀಡಬೇಕೆಂದು ಕೋರಿದರು.
ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಎಂ.ಡಿ. ರಂಗಸ್ವಾಮಿ, ಜಿಲ್ಲಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಎಂ.ಇ. ಮೊಹಿದ್ದೀನ್, ನಿರ್ದೇಶಕರಾದ ಫ್ಯಾನ್ಸಿ ಮುತ್ತಣ್ಣ, ಮೆ.ನಾ. ವೆಂಕಟನಾಯಕ್, ಮಂಜುನಾಥ್, ಕೆ.ಎನ್. ದೇವರಾಜು, ತಾಲೂಕು ಸಮಿತಿ ಮಾಜಿ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್, ತಾಲೂಕು ಕಾರ್ಯದರ್ಶಿ ಎಸ್. ನಾಗರಾಜು, ಕೋಶಾಧಿಕಾರಿ ಕೆ.ವಿ. ಉಮೇಶ್, ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯದರ್ಶಿ ಪ್ರೊ. ಹೆಚ್.ಬಿ. ಲಿಂಗಮೂರ್ತಿ ಇದ್ದರು.