ವೀರಾಜಪೇಟೆ, ಜ.೧೬: ಬಿಟ್ಟಂಗಾಲ ನಾಂಗಾಲ ಗ್ರಾಮದಲ್ಲಿ ತಾ. ೧೫ರ ಸಂಕ್ರಾAತಿ ಹಬ್ಬದ ದಿನದಂದು ಸಂಜೆ ಯುವತಿಯೋರ್ವಳ ಭೀಕರ ಹತ್ಯೆ ಮಾಡಿರುವ ದುಷ್ಕೃತ್ಯ ನಡೆದಿದೆ. ಸುಮಾರು ೨೫ ವರ್ಷ ಪ್ರಾಯದ ಯುವತಿ ಆರತಿ ಎಂಬಾಕೆಯನ್ನು ಕತ್ತಿಯಿಂದ ಕಡಿದು ಬೀಭತ್ಸ ರೀತಿಯಲ್ಲಿ ಕೊಲೆಗೈಯ್ಯಲಾಗಿದೆ.

ನಾಂಗಾಲದ ನಿವಾಸಿ ಬುಟ್ಟಿಯಂಡ ಸುನಂದ ಮಾದಪ್ಪ ಹಾಗೂ ಸರಸ್ವತಿ (ಸರಸು) ಅವರ ಪುತ್ರಿ ಆರತಿ ಹತ್ಯೆಗೀಡಾಗಿರುವ ಯುವತಿಯಾಗಿದ್ದಾರೆ.

ನಿನ್ನೆ ಸಂಜೆ ಸುಮಾರು ೭.೩೦ರ ವೇಳೆಗೆ ಈ ಘಟನೆ ನಡೆದಿದೆ. ಯುವತಿಯ ಮನೆಯ ಸನಿಹದಲ್ಲೇ ಆಕೆಯನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಈ ಬಗ್ಗೆ ಯುವಕನೋರ್ವನ ಮೇಲೆ ಸಂಶಯ ಉಂಟಾಗಿದ್ದು ಖಚಿತ ಮೂಲಗಳ ಪ್ರಕಾರ ಈ ವ್ಯಕ್ತಿಯೇ ಆಕೆಯನ್ನು ಕೊಲೆ ಮಾಡಿರುವುದಾಗಿ ದಟ್ಟ ವದಂತಿ ಹರಡಿದೆ.

ಕಂಡAಗಾಲ ರುದ್ರಗುಪ್ಪೆಯ ಕೊಟ್ರಂಡ ಟವಿ ತಿಮ್ಮಯ್ಯ ಎಂಬಾತ ಈ ಕೃತ್ಯವೆಸಗಿರುವುದಾಗಿ ಹೇಳಲಾಗುತ್ತಿದ್ದು ಘಟನೆಯ ಬಳಿಕ ಆತನ ಕೆಲ ವಸ್ತುಗಳು ಪತ್ತೆಯಾಗಿರುವುದು ಇದಕ್ಕೆ ಪುಷ್ಟಿ ನೀಡಿವೆ. ಅಲ್ಲದೆ ಆತನೂ ನಾಪತ್ತೆಯಾಗಿದ್ದಾನೆ. ಕೃತ್ಯವೆಸಗಿದ ಬಳಿಕ ಶಂಕಿತ ಆರೋಪಿ ಟವಿ ತಿಮ್ಮಯ್ಯ ಕೂಡ ಸನಿಹದ ಕೆÀರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತಗೊಂಡಿದ್ದು ಮೃತದೇಹ ಪತ್ತೆಗೆ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.

ಘಟನೆ ವಿವರ : ನಾಂಗಾಲದ ಮನೆಯಲ್ಲಿದ್ದ ಯುವತಿಯನ್ನು ಮೊಬೈಲ್ ಕರೆ ಮೂಲಕ ಮನೆಯ ಹೊರಭಾಗಕ್ಕೆ ಕರೆಸಿಕೊಳ್ಳಲಾಗಿದ್ದು ಮನೆಯ ಹಿಂಭಾಗದಲ್ಲಿ ಆಕೆಯನ್ನು ಕತ್ತಿಯಿಂದ ಕಡಿದು ಹತ್ಯೆ ಮಾಡಲಾಗಿದೆ. ಕೃತ್ಯವೆಸಗಿರುವ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ. ಯುವತಿಯ ಮೃತದೇಹವಿದ್ದ ಸ್ಥಳದ ಬಳಿ ಹೆಲ್ಮೆಟ್,

(ಮೊದಲ ಪುಟದಿಂದ) ಬಟ್ಟೆ ಹಾಗೂ ನೀರಿನ ಬಾಟಲಿ ಪತ್ತೆಯಾಗಿದ್ದು ಹೆಲ್ಮೆಟ್ ಶಂಕಿತ ಯುವಕ ಟವಿ ತಿಮ್ಮಯ್ಯನದ್ದು ಎಂದು ಹೇಳಲಾಗಿದೆ. ಈ ಅನುಮಾನದಂತೆ ತಿಮ್ಮಯ್ಯನ ಮನೆ ಸನಿಹ ಪೊಲೀಸರು ಶೋಧ ನಡೆಸಿದಾಗ ಅಲ್ಲಿ ರಕ್ತಸಿಕ್ತ ಕೋಟು, ಚಪ್ಪಲಿ, ಮೊಬೈಲ್ ದೊರೆತಿದೆ ಎನ್ನಲಾಗಿದೆ.

ಕೊಲೆಯಾದ ಯುವತಿಯ ಮನೆಯ ಪಕ್ಕದಲ್ಲೇ ಇರುವ ಕೆರೆಯೊಂದರ ದಡದಲ್ಲಿ ವಿಷದ ಬಾಟಲಿ, ಮದ್ಯದ ಬಾಟಲಿ ಹಾಗೂ ಟವಲ್ ಒಂದು ಪತ್ತೆಯಾಗಿದ್ದು ಕೃತ್ಯ ನಡೆಸಿರುವ ಶಂಕೆಯಿರುವ ಈ ಯುವಕ ಕೂಡ ಕೆÀರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗುತ್ತಿದೆ.

ಪೊಲೀಸ್ ಕಾರ್ಯಾಚರಣೆ ಮುಂದುವರಿಯುತ್ತಿವೆಯಾದರೂ ಇನ್ನೂ ನಿಗೂಢತೆ ಮುಂದುವರಿದಿದೆ.

ಮೃತ ಯುವತಿಯ ತಂದೆ ಬಿಟ್ಟಂಗಾಲದಲ್ಲಿರುವ ಗಾಲ್ಫ್ ಲಿಂಕ್ಸ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದು ನಿನ್ನೆಯೂ ಕೆಲಸಕ್ಕೆ ತೆರಳಿದ್ದರು. ತಾಯಿ ಹಾಗೂ ತಮ್ಮ ಮನೆಯಲ್ಲಿದ್ದರು. ಮೃತ ಯುವತಿ ಓದು ಮುಗಿದ ಬಳಿಕ ಪೊಲೀಸ್ ಹುದ್ದೆಗೆಂದು ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯುತ್ತಿದ್ದಳು. ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ಸಂದರ್ಶನಕ್ಕೆ ಹೋಗಿದ್ದು ಸೋಮವಾರ ಮತ್ತೆ ಬೆಂಗಳೂರಿಗೆ ತೆರಳುವವಳಿದ್ದಳು ಎನ್ನಲಾಗಿದೆ. ಮನೆಯ ಅನತಿ ದೂರದಲ್ಲಿ ಸಂಜೆ ೭.೩೦ ರ ವೇಳೆಗೆ ಕೊಲೆ ನಡೆದಿದೆ. ಕೊಲೆಗೆ ನಿಖರ ಕಾರಣ ನಮಗೆ ತಿಳಿದಿಲ್ಲ ಎಂದು ಮೃತ ಯುವತಿಯ ತಮ್ಮ ಅಜಿತ್ ಮಾಹಿತಿ ನೀಡಿದರು. ವೀರಾಜಪೇಟೆ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಆಸ್ಪತ್ರೆಯ ಶವಾಗಾರದ ಮುಂದೆ ಮೃತ ಯುವತಿಯ ಕುಟುಂಬಸ್ಥರು, ಊರಿನವರು ಅಧಿಕ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಯುವತಿಯ ಬಗ್ಗೆ ಸ್ಥಳೀಯರಲ್ಲಿ ಉತ್ತಮ ಅಭಿಪ್ರಾಯ ವ್ಯಕ್ತವಾಯಿತು. ಕೆಲವು ಮೂಲಗಳ ಪ್ರಕಾರ ಪ್ರೇಮ ಪ್ರಕರಣ ಘಟನೆಗೆ ಕಾರಣ ಇರಬಹುದು ಎಂಬ ಅಭಿಪ್ರಾಯವೂ ಕೇಳಿಬರುತ್ತಿತ್ತು. ಶಂಕಿತ ಆರೋಪಿ ಈ ಹಿಂದೆ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು ಆಭರಣ ಕಳವು ಮಾಡಿದ ಆರೋಪವಿದೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದರು.

ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಎಂ. ಅಯ್ಯಪ್ಪ, ವೀರಾಜಪೇಟೆ ವೃತ್ತನಿರೀಕ್ಷಕ ಎಸ್. ಶಿವರುದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯುವತಿಯ ಕುಟುಂಬಸ್ಥರ ದೂರಿನಂತೆ ಗ್ರಾಮಾಂತರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು ಮೃತ ಶರೀರವನ್ನು ತಹಶೀಲ್ದಾರ್ ಸಮ್ಮುಖದಲ್ಲಿ ವೀರಾಜಪೇಟೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಪೊಲೀಸ್ ತನಿಖೆ ಮುಂದುವರಿಯುತ್ತಿದ್ದು ಪೂರ್ಣ ವಿವರ ಇನ್ನಷ್ಟೆ ತಿಳಿದು ಬರಬೇಕಿದೆ.