ಸಿದ್ದಾಪುರ, ಜ. ೧೬: ಹಾಡ ಹಗಲೇ ಹುಲಿ ದಾಳಿಗೆ ಹಸುವೊಂದು ಬಲಿಯಾಗಿರುವ ಘಟನೆ ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದಲ್ಲಿ ನಡೆದಿದೆ.

ಸಿದ್ದಾಪುರ ಸಮೀಪದ ಘಟ್ಟದಳ್ಳ ಬಳಿ ಇರುವ ಚೇಂದAಡ ನಂದಾ ಮಾದಪ್ಪ ಎಂಬವರಿಗೆ ಸೇರಿದ ಗದ್ದೆಯಲ್ಲಿ ಹಸುವನ್ನು ಮೇಯಲು ಬೀಡಲಾಗಿತ್ತು. ಈ ಸಂದರ್ಭ ಹುಲಿಯೊಂದು ಹಸುವಿನ ಮೇಲೆ ದಾಳಿ ನಡೆಸಿದೆ. ಸಮೀಪದಲ್ಲಿ ಕಾಫಿ ತೋಟದಲ್ಲಿ ಕಾಫಿ ಕೊಯ್ಲು ಮಾಡುತ್ತಿದ್ದ ಕಾರ್ಮಿಕರು ಹುಲಿಯನ್ನು ಕಂಡು ಕಿರುಚಿದಾಗ ಹುಲಿಯು ಹಸುವನ್ನು ಬಿಟ್ಟು ಪರಾರಿಯಾಗಿದೆ.

ಹುಲಿ ದಾಳಿಗೆ ಸಿಲುಕಿ ಗಂಭೀರ ಗಾಯಗೊಂಡಿದ್ದ ಹಸುವು ಚಿಂತಾಜನಕ ಸ್ಥಿತಿಯಲ್ಲಿತ್ತು. ನಂತರ ಪಶು ವೈದ್ಯಾಧಿಕಾರಿ ನವೀನ್ ಚಿಕಿತ್ಸೆ ನೀಡಿದರು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ.

ಸ್ಥಳಕ್ಕೆ ಕುಶಾಲನಗರ ವಲಯದ ಅರಣ್ಯ ಸಿಬ್ದಂದಿಗಳು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳೆದ ಕೆಲವು ತಿಂಗಳ ಹಿಂದೆ ಈ ಭಾಗದಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸಿ ಸಾಯಿಸುತ್ತಿದ್ದ ಹುಲಿಯೊಂದನ್ನು ಸೆರೆ ಹಿಡಿಯಲಾಗಿತ್ತು. ಇದೀಗ ಮತ್ತೆ ಹಾಡಹಗಲೇ ಜನವಸತಿ ಪ್ರದೇಶಗಳಲ್ಲಿ ಹುಲಿಯು ಪ್ರತ್ಯಕ್ಷವಾಗಿ ಹಸುವೊಂದನ್ನು ಕೊಂದಿದ್ದು, ಆತಂಕ ಮನೆಮಾಡಿದೆ. -ವರದಿ: ವಾಸು