ಸುಂಟಿಕೊಪ್ಪ, ಜ. ೧೬: ಚುನಾವಣೆ ಬಂದಾಗ ಮಾತ್ರ ಕಾಂಗ್ರೆಸ್ ನಾಯಕರಿಗೆ ಕಾರ್ಯಕರ್ತರ ನೆನಪಾಗುತ್ತದೆ. ನಮ್ಮ ಯಾವುದೇ ಸಮಸ್ಯೆಗಳಿಗೆ ಸ್ಪಂದನ ಇಲ್ಲ. ೪ ಮಂದಿ ಗ್ರಾ.ಪಂ. ಸದಸ್ಯರಾದ ನಾವು ಸುಂಟಿಕೊಪ್ಪ ಗ್ರಾ.ಪಂ. ಆಡಳಿತ ಚುಕ್ಕಾಣಿ ಹಿಡಿದಿದ್ದೇವೆ. ಆದರೆ ಸುಲಲಿತ ಆಡಳಿತ ನಡೆಸಲು ಕಷ್ಟವಾಗುತ್ತಿದೆ ನಾಯಕರು ತಿರುಗಿ ನೋಡುತ್ತಿಲ್ಲ ಎಂದು ಸುಂಟಿಕೊಪ್ಪ ಗ್ರಾ.ಪಂ. ಸದಸ್ಯ ರಫೀಕ್ ಖಾನ್ ಹೇಳಿದರು. ಸುಂಟಿಕೊಪ್ಪ ಗುಂಡುಗುಟ್ಟಿ ಮಂಜುನಾಥಯ್ಯ ಸಹಕಾರ ಭವನದಲ್ಲಿ ಸುಂಟಿಕೊಪ್ಪ ಕಾಂಗ್ರೆಸ್ ಕಾರ್ಯಕರ್ತ ಸಭೆಯಲ್ಲಿ ಮಾತನಾಡಿದ ರಫೀಕ್ ಖಾನ್ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಕಳೆದ ೨೫ ವರ್ಷಗಳಿಂದ ಕೊಡಗಿನಲ್ಲಿ ಕಾಂಗ್ರೆಸ್ ಪಕ್ಷ ಅನಾಥವಾಗಿದೆ. ಈ ಬಾರಿ ಉತ್ತಮ ಅವಕಾಶವಿದ್ದು, ಯಾರೇ ಅಭ್ಯರ್ಥಿಯಾದರೂ ಕಾರ್ಯಕರ್ತರು ಒಗ್ಗಟ್ಟಿನಿಂದ ಪಕ್ಷದ ಗೆಲುವಿಗೆ ನೆರವಾಗಬೇಕು. ನಮ್ಮ ಶಾಸಕರು ಇದ್ದರೆ ಮಾತ್ರ ಕಾರ್ಯಕರ್ತರಿಗೆ ಬಲ ಬರಲಿದೆ. ಪ್ರತಿ ಬೂತ್ನಲ್ಲೂ ಬಿಜೆಪಿಗಿಂತ ೧೦೦ಕ್ಕೂ ಅಧಿಕ ಮತಗಳಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.
ಕೆಪಿಸಿಸಿ ಕಾರ್ಯದರ್ಶಿ ಚಂದ್ರಮೌಳಿ ಮಾತನಾಡಿ, ಯಾರೇ ಅಭ್ಯರ್ಥಿಯಾದರೂ ಎಲ್ಲಾ ಕಾರ್ಯಕರ್ತರು ಶ್ರಮವಹಿಸಿ ಕೆಲಸ ಮಾಡಬೇಕು. ಈ ಅವಕಾಶ ಕಳೆದುಕೊಂಡರೆ ಮುಂದೆAದೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಯಶ ಸಿಗುವುದಿಲ್ಲ ಎಂದು ಹೇಳಿದರು. ಗ್ರಾ.ಪಂ. ಸದಸ್ಯ ಹಕೀಂ ಮಾತನಾಡಿ ಪಕ್ಷದ ನಾಯಕರುಗಳು ಕಾರ್ಯಕರ್ತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಚುನಾವಣೆ ಬಂದಾಗ ಮಾತ್ರ ಬರುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಎಂ.ಎ. ವಸಂತ ಅವರು ರಾಜ್ಯಮಟ್ಟದ ಇಬ್ಬರು ನಾಯಕರುಗಳ ಅಧಿಕಾರದ ಕಚ್ಚಾಟದಿಂದ ಕಾರ್ಯಕರ್ತರು ಗೊಂದಲಕ್ಕೀಡಾಗಿದ್ದಾರೆ. ಇದು ಕಾಂಗ್ರೆಸ್ ಗೆಲುವಿಗೆ ಅಡ್ಡಿಯಾಗಲಿದೆ ಎಂದು ಹೇಳಿದರು. ಕೆ.ಪಿ. ಚಂದ್ರಕಲಾ ಮಾತನಾಡಿ, ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದೆ. ಈ ಬಾರಿ ಯಾರೇ ಅಭ್ಯರ್ಥಿಯಾದರೂ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದರು. ಕಾಂಗ್ರೆಸ್ ಮುಖಂಡ ಮಂಥರ್ಗೌಡ, ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಇತಿಹಾಸವಿದೆ. ಸಣ್ಣ ವಯಸ್ಸಿನಲ್ಲೇ ವಿಧಾನಸಭಾ ಅಭ್ಯರ್ಥಿ ಯಾಗಲು ಅರ್ಜಿ ಹಾಕಿದ್ದೇವೆ. ಅದೃಷ್ಟ ಇದ್ದರೆ ಟಿಕೆಟ್ ಲಭಿಸಿದರೆ ಕಾರ್ಯ ಕರ್ತರ ಸಹಕಾರದಿಂದ ಗೆಲುವು ಸಾಧಿಸಲಿದ್ದೇನೆ ಟಿಕೆಟ್ ಸಿಗದಿದ್ದರೂ ಪಕ್ಷದ ಅಭ್ಯರ್ಥಿ ಗೆಲುವಿಗೆ ಪ್ರಾಮಾ ಣಿಕವಾಗಿ ಪಣತೊಟ್ಟು ಶ್ರಮಿಸುತ್ತೇನೆ ಎಂದು ಹೇಳಿದರು. ಹರಪಳ್ಳಿ ರವೀಂದ್ರ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಂಜುನಾಥ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಚಂಗಪ್ಪ, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎಂ.ಎ. ಉಸ್ಮಾನ್ ಮಾತನಾಡಿದರು. ವೇದಿಕೆಯಲ್ಲಿ ಸುಂಟಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ಶಿವಮ್ಮ ಮಹೇಶ್, ಹಿಂದುಳಿದ ಘಟಕದ ಅಧ್ಯಕ್ಷ ನಾಗೇಶ್ ಪೂಜಾರಿ, ಮಂಜುನಾಥ್, ಶಾಜಿ, ಪಂಚಾಯಿತಿ ಸದಸ್ಯರುಗಳಾದ ಪಿ.ಎಫ್. ಸಬಾಸ್ಟಿನ್, ಆಲಿಕುಟ್ಟಿ, ಮಾಜಿ ಅಧ್ಯಕ್ಷೆ ರೋಸ್ಮೇರಿ ರಾಡ್ರಿಗಸ್, ಮಾಜಿ ಸದಸ್ಯೆ ರತ್ನಾ ಜಯನ್ ಮತ್ತಿತರರು ಇದ್ದರು.