ಮಡಿಕೇರಿ, ಜ. ೧೪: ಮಡಿಕೇರಿ ನಗರಸಭೆಯಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿರುವ ಎಸ್.ಡಿ.ಪಿ.ಐ. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದು, ಮಡಿಕೇರಿ ಹಾಗೂ ವೀರಾಜಪೇಟೆ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸುತ್ತಿದೆ.

ರಾಜ್ಯದ ೨೨೪ ಕ್ಷೇತ್ರದಲ್ಲಿ ೧೦೦ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದೇವೆ ಎಂದು ಎಸ್.ಡಿ.ಪಿ.ಐ ಈಗಾಗಲೇ ಘೋಷಣೆ ಮಾಡಿದ್ದು, ಇದರಲ್ಲಿ ಸ್ಪರ್ಧಿಸುವ ೫೪ ಕ್ಷೇತ್ರಗಳ ಪಟ್ಟಿಯನ್ನು ಅಂತಿಮಗೊಳಿಸಿ ೧೦ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ.

ಮಡಿಕೇರಿ ಹಾಗೂ ವಿಧಾನಸಭಾ ಕ್ಷೇತ್ರದಲ್ಲಿ ಬೂತ್ ಮಟ್ಟದಿಂದ ಎಸ್.ಡಿ.ಪಿ.ಯ ನಾಯಕರು ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ.

ಮಡಿಕೇರಿ ನಗರಸಭೆಯಲ್ಲಿ ೦೫ ಸದಸ್ಯರೊಂದಿಗೆ ವಿರೋಧ ಪಕ್ಷದ ಸ್ಥಾನದಲ್ಲಿರುವ ಎಸ್.ಡಿ.ಪಿ.ಐ ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದೆ ಜಾತ್ಯತೀತ ಸಿದ್ದಾಂತ ಹೊಂದಿರುವ ಪಕ್ಷಕ್ಕೆ ಬೆಂಬಲ ಸೂಚಿಸಿತ್ತು.

ಜಿಲ್ಲೆಯಲ್ಲಿ ೩೦ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ಸದಸ್ಯರನ್ನೊಂದಿರುವ ಎಸ್.ಡಿ.ಪಿ.ಐ. ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದೆ.

ಮಡಿಕೇರಿ ಕ್ಷೇತ್ರಕ್ಕೆ ಅಮೀನ್ ಮೊಹಿಸಿನ್!

ಮಡಿಕೇರಿ ನಗರಸಭಾ ಸದಸ್ಯ ಅಮೀನ್ ಮೊಹಿಸಿನ್ ಅವರು ಈ ಬಾರಿ ಮಡಿಕೇರಿ ಕ್ಷೇತ್ರದಿಂದ ಎಸ್.ಡಿ.ಪಿ.ಐ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಸುಂಟಿಕೊಪ್ಪದ ಉಸ್ಮಾನ್ ಎಂಬವರ ಹೆಸರನ್ನೂ ಶಿಫಾರಸು ಮಾಡಲಾಗಿದೆ. ಅಧಿಕೃತವಾಗಿ ಘೋಷಣೆ ಮಾತ್ರ ಬಾಕಿ ಉಳಿದಿದೆ.

ಮಡಿಕೇರಿ ಕ್ಷೇತ್ರದಿಂದ ಅಮೀನ್ ಮೊಹಿಸಿನ್ ಅವರಿಗೆ ಟಿಕೆಟ್ ನೀಡಲು ಎಸ್.ಡಿ.ಪಿ.ಐ. ನಿರ್ಧರಿಸಿದ್ದು, ಜನವರಿ ೧೫ರ ನಂತರ ಟಿಕೆಟ್ ಘೋಷಣೆಯಾಗುವ ಸಾಧ್ಯತೆ ಇದೆ.ಎಸ್.ಡಿ.ಪಿ.ಐ. ಕೂಡ ಜಿಲ್ಲೆಯಲ್ಲಿ ಬಲಿಷ್ಠವಾಗಿ, ಬೂತ್ ಮಟ್ಟದಿಂದಲೇ ಬೆಳೆಯುತ್ತಿದೆ ಎಂಬೂದಕ್ಕೆ ಮಡಿಕೇರಿಯ ನಗರಸಭೆ ಚುನಾವಣೆ ಸಾಕ್ಷಿಯಾಗಿದೆ. ಜಿಲ್ಲೆಯಲ್ಲಿ ಎಸ್.ಡಿ.ಪಿ.ಐ. ಬೂತ್ ಮಟ್ಟದಲ್ಲಿ ತನ್ನದೇ ಆದ ಕಾರ್ಯಕರ್ತರನ್ನು ಹೊಂದಿದೆ.

ಮಡಿಕೇರಿ ಕ್ಷೇತ್ರದಲ್ಲಿ ಅಮೀನ್ ಮೊಹಿಸಿನ್ ಅವರ ಸ್ಪರ್ಧೆ ಖಚಿತವಾಗಿದ್ದು, ಅಧಿಕೃತ ಘೋಷಣೆ ಬಾಕಿ ಉಳಿದಿದೆ. ವೀರಾಜಪೇಟೆ ಕ್ಷೇತ್ರದಲ್ಲಿ ಇನ್ನೂ ಎಸ್.ಡಿ.ಪಿ.ಐ. ಅಭ್ಯರ್ಥಿ ಫೈನಲ್ ಆಗಿಲ್ಲ.

-ಕೆ.ಎಂ. ಇಸ್ಮಾಯಿಲ್ ಕಂಡಕರೆ