ಸೋಮವಾರಪೇಟೆ, ಜ. ೧೪: ಪ್ರಸಕ್ತ ವರ್ಷ ಅಕಾಲಿಕ ಮಳೆಯಿಂದಾಗಿ ಕಾಫಿ ಸೇರಿದಂತೆ ಭತ್ತದ ಬೆಳೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು, ಕೃಷಿಕರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ.
ಕಾಫಿ ಫಸಲು ನಷ್ಟಕ್ಕೆ ಸಂಬAಧಿಸಿದAತೆ ರೈತರಿಗೆ ಪರಿಹಾರ ಬಿಡುಗಡೆಯಾಗಿದ್ದರೂ, ಹಲವಷ್ಟು ಮಂದಿಗೆ ಇಂದಿಗೂ ಪರಿಹಾರ ಹಣ ಖಾತೆ ಸೇರಿಲ್ಲ. ಈ ನಡುವೆ ಗಿಡಗಳಲ್ಲಿ ಉಳಿದಿರುವ ಕಾಫಿ ಹಣ್ಣನ್ನು ಕೊಯ್ಲು ಮಾಡಲು ಕಾರ್ಮಿಕರಿಗೆ ಬೇಡಿಕೆ ಹೆಚ್ಚಾಗಿದ್ದು, ಇದೇ ಸಮಯದಲ್ಲಿ ಕೊಯ್ಲಿಗೆ ಬಂದಿರುವ ಭತ್ತದ ಕೊಯ್ಲಿಗೆ ಕಾರ್ಮಿಕರ ಕೊರತೆ ಎದುರಾಗಿದೆ. ಪರಿಣಾಮ ಅನ್ಯ ಮಾರ್ಗವಿಲ್ಲದೇ ಭತ್ತವನ್ನು ಮನೆ ತುಂಬಿಸಿಕೊಳ್ಳಲು ಯಂತ್ರಗಳ ಮೊರೆ ಹೋಗಬೇಕಾಗಿದೆ.
ಕೃಷಿ ಭೂಮಿಗೆ ಕಾಲು ರಸ್ತೆಯಲ್ಲಿ ತೆರಳಬೇಕಾದವರು ಮಾತ್ರ ಕಾರ್ಮಿಕರನ್ನು ಬಳಸಿಕೊಂಡು ಕೊಯ್ಲು ಮಾಡುತ್ತಿದ್ದಾರೆ. ರಸ್ತೆ ಬದಿಯಲ್ಲಿರುವ ಬಹುತೇಕ ಗದ್ದೆಗಳಿಗೆ ಯಂತ್ರಗಳು ಇಳಿದು ಭತ್ತದ ಕೊಯ್ಲು ಮಾಡುತ್ತಿವೆ.
ಅಕಾಲಿಕ ಮಳೆ, ಕಾರ್ಮಿಕರ ಕೊರತೆಯಿಂದ ಬೇಸತ್ತ ಕೃಷಿಕರು ಸಾಂಪ್ರಾದಾಯಿಕ ಕೃಷಿ ಪದ್ದತಿಯನ್ನು ತೊರೆದು ಯಂತ್ರಗಳ ಮೊರೆ ಹೋಗಬೇಕಾದ ಅನಿವಾರ್ಯ ಒದಗಿದೆ.
ಕೃಷಿ ಇಲಾಖೆಗೆ ಒಳಪಟ್ಟಂತೆ ಸೋಮವಾರಪೇಟೆ ತಾಲೂಕಿನಲ್ಲಿ ಒಟ್ಟಾರೆ ೧೧,೩೪೦ ಹೆಕ್ಟೇರ್ ಭತ್ತ ಭೂಮಿಯಿದೆ. ಪ್ರಸಕ್ತ ವರ್ಷ ೯ ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗಿದೆ. ಭತ್ತ ಬೆಳೆ ಕಟಾವಿಗೆ ಬಂದಿದ್ದು, ಕೊಯ್ಲು ಮಾಡಬೇಕಾದ ಹಿನ್ನೆಲೆಯಲ್ಲಿ ಕೆಲವರು ಹೊರ ರಾಜ್ಯದಿಂದ ಯಂತ್ರಗಳನ್ನು ತರಿಸಿ, ಕೊಯ್ಲು ಮಾಡಿಸುತ್ತಿದ್ದಾರೆ.
ಒಂದು ಗಂಟೆಗೆ ಮೂರು ಸಾವಿರ ರೂ.ಗಳ ಬಾಡಿಗೆ ನೀಡಬೇಕಾಗಿದೆ. ಆದರೂ ಕಾರ್ಮಿಕರ ಕೊರತೆಯಿಂದಾಗಿ ಈ ಹೊಡೆತವನ್ನು ಸಹಿಸಿಕೊಳ್ಳಬೇಕಿದೆ. ಕಾಫಿ ಕುಯ್ಲು ಪ್ರಗತಿಯಲ್ಲಿರುವ ಹಿನ್ನೆಲೆ ಗದ್ದೆ ಕೆಲಸಕ್ಕೆ ಕಾರ್ಮಿಕರು ಬರುತ್ತಿಲ್ಲ. ಇದರಿಂದಾಗಿ ಅನ್ಯ ಮಾರ್ಗವಿಲ್ಲದೇ ದುಬಾರಿಯಾದರೂ ಯಂತ್ರಗಳ ಅವಲಂಭನೆ ಅನಿವಾರ್ಯವಾಗಿದೆ.
ಈ ಹಿಂದಿನ ವರ್ಷಗಳಲ್ಲಿ ಭತ್ತ ಕೊಯ್ಲಿನ ಸಂದರ್ಭದಲ್ಲಿ ಬಯಲು ಸೀಮೆಯಿಂದ ಕಾರ್ಮಿಕರ ತಂಡಗಳು ಗ್ರಾಮಗಳಿಗೆ ಬಂದು ತಿಂಗಳುಗಟ್ಟೆಲೆ ಇದ್ದು, ಭತ್ತ ಕೆಲಸ ಮುಗಿಸಿ ಹೋಗುತ್ತಿದ್ದರು. ಅಕಾಲಿಕ ಮಳೆಯಿಂದ ಬೇಸತ್ತ ಕೃಷಿಕರು ಭತ್ತ ಬೆಳೆಯಲು ಹಿಂದೇಟು ಹಾಕಿದ ಪರಿಣಾಮ, ಕಾರ್ಮಿಕರಿಗೆ ಸಾಕಾಗುವಷ್ಟು ಕೂಲಿ ಸಿಗುವುದಿಲ್ಲ ಎಂದು ತಿಳಿದು ಕಳೆದ ನಾಲ್ಕೆöÊದು ವರ್ಷಗಳಿಂದ ಹೊರ ಜಿಲ್ಲೆಗಳಿಂದ ಕಾರ್ಮಿಕರು ಬರುತ್ತಿಲ್ಲ ಎಂದು ಕೃಷಿಕರು ಅಭಿಪ್ರಾಯಿಸಿದ್ದಾರೆ.
ತಾಲೂಕಿನಲ್ಲಿ ಕ್ಯಾಸರಿ, ತುಂಗ, ತನು, ಐ.ಆರ್.೬೪, ಬಾಂಗ್ಲಾ ರೈಸ್, ಅತೀರಾ ತಳಿಗಳು ಈಗಾಗಲೇ ಕೊಯ್ಲಿಗೆ ಬಂದಿವೆ. ಶನಿವಾರಸಂತೆ, ಕೊಡ್ಲಿಪೇಟೆ, ಸೋಮವಾರಪೇಟೆ, ಶಾಂತಳ್ಳಿ ಹೋಬಳಿಯಲ್ಲಿ ಕೊಯ್ಲು ಭರದಿಂದ ಸಾಗಿದೆ. ಸೂರ್ಲಬ್ಬಿ, ಕಿಕ್ಕರಳ್ಳಿ, ಕುಂಬಾರಗಡಿಗೆ, ಮಂಕ್ಯಾ, ಹರಗ, ಮೂವತ್ತೊಕ್ಕಲು, ಹೆಗ್ಗಡಮನೆ, ಕೂತಿ, ಎಡದಂಟೆ ಗ್ರಾಮಗಳಲ್ಲಿ ಕಾಡುಕೋಣ, ಕಾಡುಹಂದಿಗಳ ಧಾಳಿಯಿಂದ ಉಳಿದುಕೊಂಡಿರುವ ಭತ್ತವನ್ನು ಇದೀಗ ಕೊಯ್ಲು ಮಾಡಲಾಗುತ್ತಿದೆ.
ಅಕಾಲಿಕ ಮಳೆ, ಮೋಡದ ವಾತಾವರಣದಿಂದ ಕೊಯ್ಲು ವಿಳಂಬವಾಗಿತ್ತು. ಈಗ ಕೊಯ್ಲು ಮಾಡಲೇಬೇಕು. ಹಾಗೆಯೇ ಬಿಟ್ಟರೆ ಭತ್ತ ಉದುರಿ ನಷ್ಟವಾಗುತ್ತದೆ. ಈ ಕಾರಣದಿಂದ ದುಪ್ಪಟ್ಟು ಬಾಡಿಗೆ ನೀಡಿ ಯಂತ್ರದ ಮೂಲಕ ಕೊಯ್ಲು ಮಾಡಿಸುತ್ತಿದ್ದೇವೆ. ಉತ್ಪಾದನಾ ವೆಚ್ಚ ಜಾಸ್ತಿಯಾಗಿದ್ದು, ಕೃಷಿಕರು ನಷ್ಟದ ಹಾದಿಯಲ್ಲಿದ್ದಾರೆ. ಸರ್ಕಾರದಿಂದ ಭತ್ತ ಕೃಷಿಗೆ ಪ್ರೋತ್ಸಾಹ ಧನ ನೀಡಬೇಕು ಎಂದು ಕೃಷಿಕರು ಅಭಿಪ್ರಾಯಿಸಿದ್ದಾರೆ.