ಮಡಿಕೇರಿ, ಜ. ೧೩: ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರನ್ನು ಖಾಯಂಗೊಳಿಸಲು ತಾ.೨೫ರೊಳಗೆ ಕ್ರಮ ವಹಿಸದಿದ್ದಲ್ಲಿ ತಾ. ೩೧ರಂದು ಕೆಲಸ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲು ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘ ನಿರ್ಧರಿಸಿದೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಈರಪ್ಪ ಶೆಟ್ಟಿ, ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವ ಪೌರಕಾರ್ಮಿಕರನ್ನು ಖಾಯಂ ಮಾಡಲು ಹೊರಟಿರುವ ಸರ್ಕಾರ, ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುವ ವಾಹನ ಚಾಲಕರು, ನೀರು ಸರಬರಾಜು ಸಹಾಯಕರು, ಲೋಡರ್ಸ್, ಹೆಲ್ಪರ್ಸ್, ಡಾಟಾ ಆಪರೇಟರ್ಸ್ ಸೇರಿದಂತೆ ೧೫ ಸಾವಿರಕ್ಕೂ ಹೆಚ್ಚು ನೌಕರರನ್ನು ಗುತ್ತಿಗೆಯಲ್ಲಿಯೇ ಉಳಿಸಿಕೊಳ್ಳುವ ಮೂಲಕ ತಾರತಮ್ಯ ಎಸಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸ್ವಚ್ಛತೆ ಮತ್ತು ಕುಡಿಯುವ ನೀರು ನಿರ್ವಹಣೆಯಲ್ಲಿ ಹೊರಗುತ್ತಿಗೆ ನೌಕರರ ಪಾತ್ರ ಮಹತ್ತರವಾಗಿದೆ. ೨೦೧೭ರಲ್ಲಿ ಪೌರಕಾರ್ಮಿಕರ ನೇಮಕಾತಿಗೊಳಿಸಿದಾಗಲೂ ಹೊರಗುತ್ತಿಗೆ ನೌಕರರನ್ನು ಗುತ್ತಿಗೆ ಆಧಾರದಲ್ಲೇ ಉಳಿಸಲಾಯಿತು. ಸರ್ಕಾರದ ನೀತಿ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಎಂಬAತಾಗಿದೆ. ಒಂದೇ ಇಲಾಖೆಯಲ್ಲಿ ಕೆಲಸ ನಿರ್ವಹಿಸುವವರ ಮಧ್ಯೆ ಒಡೆದು ಆಳುವ ನೀತಿ ಅನುಸರಿಸುವುದು ಸರಿಯಲ್ಲ. ಹೊರಗುತ್ತಿಗೆ ನೌಕರರನ್ನು ಖಾಯಂಗೊಳಿಸಲು ತಾ.೨೫ರೊಳಗೆ ಕ್ರಮ ವಹಿಸದಿದ್ದಲ್ಲಿ ನ್ಯಾಯಬದ್ಧ ಹಕ್ಕಿಗಾಗಿ ಆಗ್ರಹಿಸಿ ತಾ.೩೧ರಂದು ವಿಧಾನಸೌಧಕ್ಕೆ ಮುತ್ತಿಗೆ ಹಮ್ಮಿಕೊಳ್ಳಲಾಗುವುದು. ಬೇಡಿಕೆ ಈಡೇರುವವರೆಗೂ ಕೆಲಸ ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು ಎಂದ ಅವರು, ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ನೀರು ಸರಬರಾಜು ಹೊರಗುತ್ತಿಗೆ ವಿಭಾಗದ ಜಿಲ್ಲಾಧ್ಯಕ್ಷ ಶಿವಪ್ರಕಾಶ್ ಶೆಟ್ಟಿ, ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಬೋಪಣ್ಣ, ಜಿಲ್ಲಾ ಸಂಚಾಲಕ ಮಹದೇವಪ್ಪ, ಕಾರ್ಯದರ್ಶಿ ರಮೇಶ್ ಕುಟ್ಟಪ್ಪ ಹಾಜರಿದ್ದರು.