ಸೊಮವಾರಪೇಟೆ,ಜ.೧೩: ಸಮೀಪದ ಯಡೂರು ಬಿ.ಟಿ.ಸಿ.ಜಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ದಿಢೀರ್ ಭೇಟಿ ನೀಡಿದ ಶಾಸಕರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆದ ಎಂ.ಪಿ. ಅಪ್ಪಚ್ಚುರಂಜನ್ ಅವರು, ಶಿಕ್ಷಣದ ಅವ್ಯವಸ್ಥೆಗೆ ಆಕ್ರೋಶ ವ್ಯಕ್ತಪಡಿಸಿ, ಕಾಲೇಜು ಪ್ರಾಂಶುಪಾಲರು, ಉಪನ್ಯಾಸಕರಿಗೆ ಕ್ಲಾಸ್ ತೆಗೆದುಕೊಂಡ ಘಟನೆ ನಡೆಯಿತು. ಕಾಲೇಜಿನ ಆಡಳಿತ ವ್ಯವಸ್ಥೆ ಹದಗೆಟ್ಟಿದ್ದು, ಪ್ರಥಮ ಹಾಗು ದ್ವಿತೀಯ ಬಿ.ಎ. ಇಂಗ್ಲೀಷ್ ವಿಷಯದಲ್ಲಿ ಎಲ್ಲಾ ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವ ಬಗ್ಗೆ ಪ್ರಾಂಶುಪಾಲರು, ಉಪನ್ಯಾಸಕರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಹಿಂದೊಮ್ಮೆ ಪ್ರತಿಷ್ಠಿತ ಕಾಲೇಜೆಂದು ಹೆಸರುವಾಸಿಯಾಗಿದ್ದ ಬಿಟಿಸಿಜಿ ಕಾಲೇಜಿನಲ್ಲಿ ಇತ್ತೀಚಿನ ದಿನಗಳಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಉಪನ್ಯಾಸಕರು ಹಾಗು ಸಿಬ್ಬಂದಿಗಳು ತಮ್ಮಿಷ್ಟದಂತೆ ಬರುವುದು-ಹೋಗುವುದು ಮಾಡುತ್ತಿದ್ದಾರೆ. ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಇಂಗ್ಲೀಷ್‌ನಲ್ಲಿ ಅನುತ್ತೀರ್ಣರಾಗಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆ ಶಾಸಕರು, ಕಾಲೇಜಿಗೆ ದಿಢೀರ್ ಭೇಟಿ ನೀಡಿದರು.

ಈ ಸಂದರ್ಭ ದೂರುಗಳಿಗೆ ಪೂರಕವಾಗುವಂತಹ ಸನ್ನಿವೇಶ ಕಾಲೇಜಿನಲ್ಲಿ ಕಂಡುಬAತು. ಕೆಲವು ವಿದ್ಯಾರ್ಥಿಗಳು ಆಟವಾಡುತ್ತಿದ್ದರೆ, ಉಪನ್ಯಾಸಕರುಗಳು ಕೊಠಡಿಯಲ್ಲಿ ಹರಟೆ ಹೊಡೆಯುತ್ತಿದ್ದರು. ಕೆಲವು ತರಗತಿಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ಗೈರಾಗಿರುವುದು ಶಾಸಕರ ಪಿತ್ತ ನೆತ್ತಿಗೇರುವಂತೆ ಮಾಡಿತು!

ಈ ಸಂದರ್ಭ ಪ್ರಾಂಶುಪಾಲ ರಾಜು ಅವರನ್ನು ಪ್ರಶ್ನಿಸಿದ ಶಾಸಕರು, ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಬರುತ್ತಿಲ್ಲ. ಅಲ್ಲದೆ ಇಂಗ್ಲೀಷ್ ವಿಷಯದಲ್ಲಿ ಎಲ್ಲಾ ವಿದ್ಯಾಥಿಗಳು ಅನುತ್ತೀರ್ಣರಾಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ತೀವ್ರ ತರಾಟೆಗೆ ತೆಗೆದುಕೊಂಡರು. ಶಾಸಕರು ಬಂದ ನಂತರ ಲಗುಬಗೆಯಿಂದ ತರಗತಿಗೆ ಬಂದ ಇಂಗ್ಲೀಷ್ ಉಪನ್ಯಾಸಕರನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವ ಬಗ್ಗೆ ಸಮಜಾಯಿಷಿಕೆ ಕೇಳಿದರು.

ಈ ಸಂದರ್ಭ ಉತ್ತರಿಸಿದ ಉನ್ಯಾಸಕರು, ಪ್ರಸ್ತುತ ಶಿಕ್ಷಣ ನೀತಿ ಬದಲಾಗಿದೆ. ಅಲ್ಲದೆ ಸರಿಯಾಗಿ ಮೌಲ್ಯಮಾಪನ ನಡೆದಿಲ್ಲವೆಂದು ಸಬೂಬು ಹೇಳಿದರು. ಇದಕ್ಕೆ ಮತ್ತೆ ಆಕ್ರೋಶಿತರಾದ ಶಾಸಕರು, ನೀವುಗಳು ಸರ್ಕಾರಿ ಸಂಬಳ ತೆಗೆದುಕೊಳ್ಳುತ್ತಿರಾ.., ಆದರೆ ಸರಿಯಾಗಿ ಕೆಲಸ ಮಾಡುವುದಿಲ್ಲ; ಶಿಕ್ಷಣ ನೀತಿಗೆ ಸರಿಯಾಗಿ ಪಾಠಮಾಡಿದ್ದರೆ ಈ ರೀತಿಯ ಫಲಿತಾಂಶ ಬರುತಿತ್ತೇ? ಎಂದು ಪ್ರಶ್ನಿಸಿದರು.

ಈ ಹಿಂದೆ ೫೦೦-೬೦೦ ವಿದ್ಯಾರ್ಥಿಗಳಿದ್ದ ಕಾಲೇಜಿನಲ್ಲಿ ಇಂದು ೧೪೩ ವಿದ್ಯಾರ್ಥಿಗಳಿದ್ದಾರೆ. ನೀವುಗಳು ಈ ಕಾಲೇಜನ್ನು ಮುಚ್ಚಿಸಲು ಬಂದಿದ್ದೀರಾ? ಎಂದು ಹರಿಹಾಯ್ದರು. ಸ್ಥಳದಲ್ಲಿಯೇ ಮಂಗಳೂರು ವಿಶ್ವ ವಿದ್ಯಾನಿಲಯದ ಜಂಟಿ ನಿರ್ದೇಶಕರು ಹಾಗೂ ಆಯುಕ್ತರಿಗೆ ದೂರವಾಣಿ ಕರೆ ಮಾಡಿ ತಕ್ಷಣವೆ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಸಿಬ್ಬಂದಿಗಳು ಹಾಗೂ ಉಪನ್ಯಾಸಕರ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸಬೇಕು. ಕರ್ತವ್ಯ ಲೋಪ ಎಸಗಿರುವ ಉಪನ್ಯಾಸಕರನ್ನು ಅಮಾನತ್ತು ಮಾಡುವಂತೆ ಸೂಚಿಸಿದರು.

ಈ ತಿಂಗಳ ಅಂತ್ಯಕ್ಕೆ ನಿವೃತ್ತಿಯಾಗಲಿರುವ ಪ್ರಾಂಶುಪಾಲರನ್ನು ತರಾಟೆಗೆ ತೆಗದುಕೊಂಡ ಶಾಸಕರು ಆಡಳಿತದಲ್ಲಿ ಬಿಗಿ ಹಿಡಿತ ಇಟ್ಟುಕೊಳ್ಳಿ ; ಇಲ್ಲವಾದರೆ ನಿವೃತ್ತಿಗೂ ಮುನ್ನವೇ ಅಮಾನತ್ತು ಆಗುವಿರಿ. ಮುಂದಿನ ವಾರ ಮತ್ತೊಮ್ಮೆ ಕಾಲೇಜಿಗೆ ಭೇಟಿ ನೀಡುವುದಾಗಿ ಎಚ್ಚರಿಸಿದರು.