ಕಣಿವೆ, ಜ. ೧೩: ಬಡಾವಣೆಗೆ ಅಗತ್ಯವಿದ್ದ ಸೂಕ್ತ ಚರಂಡಿ ಹಾಗೂ ರಸ್ತೆಗೆ ಒತ್ತಾಯಿಸಿ ಚುನಾವಣೆ ಬಹಿಷ್ಕಾರದ ತೀರ್ಮಾನ ಕೈಗೊಂಡಿರುವ ಪ್ರಸಂಗ ತೊರೆನೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ತಗ್ಗು ಪ್ರದೇಶದಲ್ಲಿರುವ ನಿವಾಸಿಗಳ ವಸತಿ ಪ್ರದೇಶಕ್ಕೆ ಮಳೆಗಾಲದಲ್ಲಿ ಸುರಿವ ಮಳೆಯಿಂದಾಗಿ ಗ್ರಾಮದ ಎತ್ತರ ಪ್ರದೇಶಗಳಿಂದ ಹರಿದು ಬರುವ ನೀರು ಮನೆಗಳಿಗೆ ನುಗ್ಗುತ್ತಿದೆ. ಇದರಿಂದಾಗಿ ಮಹಿಳೆಯರು ಹಾಗೂ ಮಕ್ಕಳು ಸಂಚರಿಸಲು ಅನಾನುಕೂಲವಾಗಿತ್ತು.

ಈ ಹಿನ್ನೆಲೆಯಲ್ಲಿ ಗ್ರಾಮದ ನಿವಾಸಿಗಳು ತಮಗೆ ಅತೀ ಅಗತ್ಯವಿರುವ ಚರಂಡಿ ಹಾಗೂ ರಸ್ತೆ ನಿರ್ಮಾಣಕ್ಕೆ ಹಿಂದಿನಿAದಲೂ ಪಂಚಾಯಿತಿ ಆಡಳಿತಕ್ಕೆ ಒತ್ತಾಯ ಮಾಡುತ್ತ ಬಂದಿದ್ದರು. ಅದರಂತೆ ಪಂಚಾಯಿತಿ ಆಡಳಿತ ಚರಂಡಿ ನಿರ್ಮಿಸಲು ಮುಂದಾದ ಸಂದರ್ಭ ರಸ್ತೆಯ ಮಾರ್ಗದಲ್ಲಿರುವ ತೆಂಗಿನ ಮರವೊಂದನ್ನು ಕಟಾವು ಮಾಡಲು ಮನೆಯ ಮಾಲೀಕರು ಬಿಡದ ಕಾರಣ ಕಾಮಗಾರಿ ಸ್ಥಗಿತಗೊಂಡಿದೆ. ಆದರೆ ಪಂಚಾಯಿತಿಯವರು ಸಾರ್ವಜನಿಕರ ಹಿತದೃಷ್ಟಿಯಿಂದ ತೆಂಗಿನ ಮರ ಕಟಾವು ಮಾಡಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡದಿದ್ದರೆ ಮುಂಬರುವ ಸಾರ್ವತ್ರಿಕ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ನಿವಾಸಿಗಳು ನಾಮಫಲಕ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

ಈ ಸಂದರ್ಭ ಪಂಚಾಯಿತಿ ಸದಸ್ಯ ಶಿವಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ನಿವಾಸಿಗಳಿಗೆ ಆಗುತ್ತಿದ್ದ ಸಮಸ್ಯೆಗಳನ್ನು ಕಂಡು ಚರಂಡಿ ನಿರ್ಮಿಸಲು ಪಂಚಾಯಿತಿ ವತಿಯಿಂದ ಮುಂದಾದೆವು. ಆದರೆ ಚರಂಡಿ ಕಾಮಗಾರಿಗೆ ಅಡ್ಡಿಯಾಗಿದ್ದ ತೆಂಗಿನ ಮರವೊಂದನ್ನು ಕಟಾವು ಮಾಡಲು ಆ ಮರದ ಮಾಲೀಕ ಬಿಡುತ್ತಿಲ್ಲ ಹಾಗಾಗಿ ಕಾಮಗಾರಿ ವಿಳಂಬವಾಗಿದೆ. ಸದ್ಯದಲ್ಲಿಯೇ ಸಮಸ್ಯೆ ಇತ್ಯರ್ಥ ಮಾಡುವುದಾಗಿ ತಿಳಿಸಿದರು. ಈ ಸಂದರ್ಭ ಪ್ರಮುಖರಾದ ಟಿ.ಎಲ್. ಮಹೇಶ್ ನಿವಾಸಿಗಳಾದ ರಾಮಮ್ಮ, ಗೋವಿಂದ, ವನಜಾಕ್ಷಿ, ಕುಮಾರ, ಗಣೇಶ್ ಮೊದಲಾದವರಿದ್ದರು.