ಸೋಮವಾರಪೇಟೆ, ಜ. ೧೩: ಭೂ ಮಾಲೀಕರಿಗೆ ಸಹಾಯ ಮಾಡಿ, ಭೂ ರಹಿತ ಬಡವರನ್ನು ನಾಶ ಮಾಡಲು ಕೃಷಿ ಭೂಮಿ ಗುತ್ತಿಗೆ ನೀಡುವ ಕಾಯ್ದೆಯನ್ನು ಸರ್ಕಾರ ಜಾರಿಗೆ ತರಲು ಉದ್ದೇಶಿಸಿದೆ ಎಂದು ಸಿಪಿಐ (ಎಂಎಲ್) ರೆಡ್‌ಸ್ಟಾರ್ ಪಕ್ಷ ಆರೋಪಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಮಂಜುನಾಥ್, ಸಿ ಮತ್ತು ಡಿ ಭೂಮಿ ಯನ್ನು ಒತ್ತುವರಿ ಮಾಡಿಕೊಂಡು ಕೃಷಿ ಮಾಡುತ್ತಿರುವವರಿಗೆ ಜಾಗವನ್ನು ಗುತ್ತಿಗೆ ನೀಡಲು ಸರ್ಕಾರ ಮುಂದಾಗಿದೆ. ಮಲೆನಾಡು ಭಾಗದಲ್ಲಿ ಶ್ರೀಮಂತ ರಾಜಕಾರಣಿಗಳು, ರಿಯಲ್ ಎಸ್ಟೇಟ್ ಕುಳಗಳು ಸಾವಿರಾರು ಎಕರೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿ ಕೊಂಡಿದ್ದಾರೆ. ಆ ಜಾಗವನ್ನು ಸರ್ಕಾರ ಹಣ ಪಡೆದು ಗುತ್ತಿಗೆ ನೀಡಿದರೆ, ಮಂದಿನ ದಿನಗಳಲ್ಲಿ ಬಡವರಿಗೆ ನಿವೇಶನಗಳು ಇಲ್ಲದಂತಾಗುತ್ತದೆ ಎಂದರು.
ಬಡವರು, ವಸತಿಹೀನರು, ಭೂ ರಹಿತರು, ದಲಿತರು, ಆದಿವಾಸಿಗಳು, ಬಡ ರೈತರು ಸರ್ಕಾರದ ಕಾಯ್ದೆಯಿಂದ ತೊಂದರೆಗೆ ಸಿಲುಕಲಿದ್ದಾರೆ. ಬಡವರು ಅಲ್ಪಸ್ವಲ್ಪ ಸಿ ಮತ್ತು ಡಿ ಭೂಮಿಯಲ್ಲಿ ವ್ಯವಸಾಯ ಮಾಡಿಕೊಂಡಿದ್ದಾರೆ. ಅವರು ಗುತ್ತಿಗೆ ಹಣ ಪಾವತಿಸಲು ಸಾಧ್ಯವಿಲ್ಲದ ಕಾರಣ ಅವರ ಹೆಸರಿಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದರು. ಕೊಡಗಿನಲ್ಲಿ ಎರಡೂವರೆ ಲಕ್ಷ ಎಕರೆ ಸಿ ಮತ್ತು ಡಿ ಜಾಗವಿದ್ದು, ದಲಿತರು, ಆದಿವಾಸಿಗಳು, ಸೈನಿಕರು, ಬಡ ರೈತರು, ಅಲ್ಪಸಂಖ್ಯಾತರು, ಶೋಷಿತರು ಮತ್ತು ಧಮನಿತರಿಗೆ ಉಚಿತವಾಗಿ ಹಂಚಿ, ಹಕ್ಕುಪತ್ರ ಒದಗಿಸಿ ಕೊಡಬೇಕೆಂದು ಒತ್ತಾಯಿ ಸಿದರು. ಬಡವರು ಹಕ್ಕುಪತ್ರಕ್ಕಾಗಿ ಫಾರಂ ೫೩, ೫೭ರಲ್ಲಿ ಅರ್ಜಿ ಸಲ್ಲಿಸಿಕೊಂಡು ಹಲವು ವರ್ಷಗಳಿಂದ ಕಾಯುತ್ತಿದ್ದಾರೆ. ಆದರೆ ಶ್ರೀಮಂತರು ಮತ್ತು ರಾಜಕೀಯ ಪ್ರಭಾವಿಗಳಿಗೆ ಹಕ್ಕುಪತ್ರ ವಿತರಿಸಲಾಗುತ್ತಿದೆ. ಕೆಲ ಸಿಬ್ಬಂದಿಗಳು ಲಂಚ ಪಡೆದು ಕಾನೂನು ಬಾಹಿರ ಕೃತ್ಯ ಎಸಗುತ್ತಿದ್ದಾರೆ. ಕೂಡಲೇ ಬಡವರಿಗೆ ಹಕ್ಕುಪತ್ರ ವಿತರಿಸಬೇಕು. ತಪ್ಪಿದಲ್ಲಿ ಪಕ್ಷದ ವತಿಯಿಂದ ಸಂಬAಧಿಸಿದ ಅಧಿಕಾರಿಗಳ ವಿರುದ್ಧ ನ್ಯಾಯಾಲಯ ದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.೧೯೬೯ರ ಭೂ ಮಂಜೂರಾತಿ ಅಧಿನಿಯಮ ಅನ್ವಯ ದೇಶದ ದಲಿತರಿಗೆ ಶೇ.೧೫, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ವಿಕಲಚೇತನರು ಹಾಗೂ ಮಾಜಿ ಸೈನಿಕರಿಗೆ ತಲಾ ಶೇ.೧೦ರಂತೆ ಭೂಮಿ ನೀಡಬೇಕಾಗಿದೆ. ಆದರೆ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಡವರಿಗೆ ಮೂರು ಮುಕ್ಕಾಲು ಸೆಂಟ್ ನಿವೇಶನ ನೀಡಲಾಗುತ್ತಿದೆ. ಆದರೆ ಈಗ ೨ ಸೆಂಟ್ ಜಾಗ ನೀಡುವ ಬಗ್ಗೆ ಚರ್ಚೆ ಆಗುತ್ತಿದೆ. ೨ ಸೆಂಟ್ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಸರ್ಕಾರಿ ಜಾಗವನ್ನು ಭೂಮಾಲೀಕರಿಗೆ ಮಾರಾಟ ಮಾಡಿದರೆ, ಮುಂದಿನ ದಿನಗಳಲ್ಲಿ ನಿವೇಶನಕ್ಕೆ ಅರ್ಧ ಸೆಂಟ್ ಜಾಗ ಸಿಗುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ಗೋಷ್ಠಿಯಲ್ಲಿ ಪಕ್ಷದ ಪದಾಧಿಕಾರಿಗಳಾದ ಎಚ್.ಈ. ಸಣ್ಣಪ್ಪ, ಎಸ್.ಡಿ. ಮಹೇಶ್ ಇದ್ದರು.