ಗೋಣಿಕೊಪ್ಪಲು, ಜ. ೧೩: ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಗೋಣಿಕೊಪ್ಪ ಬಸ್ ನಿಲ್ದಾಣ ನಿರ್ಮಾಣಕ್ಕೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ೧ ಕೋಟಿ ಅನುದಾನವನ್ನು ಆರಂಭಿಕ ಹಂತದಲ್ಲಿ ಬಿಡುಗಡೆಗೊಳಿಸಿದ್ದಾರೆ. ಇದರಿಂದಾಗಿ ಬಸ್ ನಿಲ್ದಾಣದ ಕಾಮಗಾರಿಯು ಸದ್ಯದಲ್ಲಿಯೇ ಆರಂಭಗೊಳ್ಳುವ ನಿರೀಕ್ಷೆ ಸೃಷ್ಟಿಯಾಗಿದೆ.
ಗೋಣಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸ್ ನಿಲ್ದಾಣವು ಎರಡು ಎಕರೆ ವಿಸ್ತೀರ್ಣದಲ್ಲಿದ್ದು ಸುಸಜ್ಜಿತ ಬಸ್ ನಿಲ್ದಾಣ ಹಾಗೂ ಹಲವು ಮಳಿಗೆಗಳನ್ನು ನಿರ್ಮಿಸಲು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಈ ಹಿಂದೆಯೇ ನಿರ್ಧಾರ ಕೈಗೊಂಡಿತ್ತು. ನಿಲ್ದಾಣದ ನೀಲನಕ್ಷೆ ಸೇರಿದಂತೆ ಸರ್ವೆ ಕಾರ್ಯವೂ ಅಂತಿಮಗೊAಡಿತ್ತು. ಅನುದಾನದ ಸಮಸ್ಯೆ ಎದುರಿಸುತ್ತಿದ್ದ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಈ ಬಗ್ಗೆ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರನ್ನು ಹಲವು ಬಾರಿ ಮನವಿ ಮಾಡಿತ್ತು. ಪಂಚಾಯಿತಿ ಸದಸ್ಯರ ಮನವಿಯನ್ನು ಪರಿಗಣಿಸಿದ ಶಾಸಕ ಕೆ.ಜಿ.ಬೋಪಯ್ಯ ಮುಖ್ಯಮಂತ್ರಿ ಬಳಿ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿ ಹಾಗೂ ಕೆಲ ಮುಖಂಡರ ನಿಯೋಗವನ್ನು ಕರೆದೊಯ್ದು ಆರಂಭಿಕ ಹಂತದಲ್ಲಿ ೧ ಕೋಟಿ ಅನುದಾನವನ್ನು ಮುಖ್ಯಮಂತ್ರಿಗಳಿAದ ಬಸ್ ನಿಲ್ದಾಣದ ಅಭಿವೃದ್ಧಿಗೆ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಾಸಕರಾದ ಕೆ.ಜಿ.ಬೋಪಯ್ಯನವರ ಮುಂದಾಳತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ನಿಯೋಗದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಮ್ಯಬಾಲು ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ,
(ಮೊದಲ ಪುಟದಿಂದ) ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಕೆ. ಬೋಪಣ್ಣ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಬಿ.ಎನ್. ಪ್ರಕಾಶ್, ಕೊಣಿಯಂಡ ಬೋಜಮ್ಮ, ಚೈತ್ರ ಬಿ. ಚೇತನ್ ಸೇರಿದಂತೆ ಇನ್ನಿತರ ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.
ಈ ಹಿಂದೆ ಗೋಣಿಕೊಪ್ಪ ಪುರಸಭೆ ಆಗಿದ್ದ ಸಂದರ್ಭ ಬುಟ್ಟಿಯಂಡ ಅಪ್ಪಾಜಿ ಅವರು ಅಧ್ಯಕ್ಷರಾಗಿದ್ದ ವೇಳೆ ನೂತನ ಬಸ್ ನಿಲ್ದಾಣ, ತಂಗುದಾಣ ಹಾಗೂ ಶೌಚಾಲಯವನ್ನು ೧೯೭೦ರ ದಶಕದಲ್ಲಿ ನಿರ್ಮಾಣ ಮಾಡಲಾಗಿತ್ತು. ಜಿಲ್ಲೆಯಲ್ಲಿಯೇ ಮಾದರಿ ಬಸ್ ನಿಲ್ದಾಣ ಎಂಬ ಹೆಸರು ಗಳಿಸಿತ್ತು.
ಬಸ್ ನಿಲ್ದಾಣ ೪೫ ವರ್ಷಗಳಿಗೂ ಅಧಿಕ ಸಮಯದವರೆಗೂ ಗಟ್ಟಿಮುಟ್ಟಾಗಿತ್ತು. ಮಳೆಗಾಲ ಸಂದರ್ಭ ನಿಲ್ದಾಣದ ಮುಂಭಾಗ ಕೊಂಚ ಕುಸಿದು ಬಿದ್ದಿತ್ತು. ಕೂಡಲೇ ಹಳೆಯದಾದ ಕಟ್ಟಡವನ್ನು ಕೆಡವಲು ರಾತ್ರೋರಾತ್ರಿ ಕ್ರಮ ಕೈಗೊಳ್ಳಲಾಯಿತು. ಆದರೆ ಕೆಡವಿದ ವೇಗದಲ್ಲಿ ಹೊಸ ಬಸ್ ನಿಲ್ದಾಣದ ಕನಸ್ಸು ನನಸಾಗಲಿಲ್ಲ.
ಹೈಟೆಕ್ ಬಸ್ ನಿಲ್ದಾಣ ಕಟ್ಟುವ ಕೆಲಸಕ್ಕೆ ಕೆಲವು ಪಂಚಾಯ್ತಿ ಸದಸ್ಯರು ಸ್ವಇಚ್ಚೆಯಿಂದ ಆಸಕ್ತಿ ವಹಿಸಿ ನೀಲಿ ನಕ್ಷೆ ತಯಾರು ಮಾಡಿದ್ದರು. ೩೦ ಕೋಟಿ ವೆಚ್ಚದಲ್ಲಿ ಕೆಲಸ ನಿರ್ವಹಿಸಲು ಕೇರಳದ ಸಂಸ್ಥೆ ಮುಂದೆ ಬಂದಿತ್ತು. ಮೂರು ಅಂತಸ್ತಿನಲ್ಲಿ ನೆಲ ಮಳಿಗೆ ಸೇರಿದಂತೆ ಮೂರುವರೆ ಎಕರೆ ಜಾಗದಲ್ಲಿ ೨೫ ವರ್ಷಕ್ಕೆ ಲೀಸ್ ಪಡೆಯಲು ಸಂಸ್ಥೆ ತಯಾರು ನಡೆಸಿತ್ತು. ಇನ್ನೇನು ಪ್ರಕ್ರಿಯೆ ಆರಂಭವಾಗಬೇಕು ಅನ್ನುವಷ್ಟರಲ್ಲಿ ಹಲವು ಕಾರಣಗಳಿಂದ ಅತೀ ದೊಡ್ಡ ಬಸ್ ನಿಲ್ದಾಣದ ಯೋಜನೆ ಹಳ್ಳ ಹಿಡಿದಿತ್ತು.
ನಂತರದ ವರ್ಷಗಳಲ್ಲಿ ನೂತನ ಬಸ್ ನಿಲ್ದಾಣಕ್ಕೆ ಅನುದಾನ ಕ್ರೋಢೀಕರಿಸುವ ನಿಟ್ಟಿನಲ್ಲಿ ಪಂಚಾಯಿತಿ ಆಡಳಿತ ಮಂಡಳಿ ತಮ್ಮ ಮಾಸಿಕ ಸಭೆಯಲ್ಲಿ ಹಲವು ತೀರ್ಮಾನಗಳನ್ನು ಕೈಗೊಂಡಿತ್ತು. ಆದರೂ ಅವಶ್ಯಕತೆ ಇರುವ ಅನುದಾನದ ಕ್ರೋಢೀಕರಣ ಸಾಧ್ಯವಾಗಿರಲಿಲ್ಲ. ನಂತರದ ಸಮಯದಲ್ಲಿ ನಿಲ್ದಾಣದಲ್ಲಿ ತಾತ್ಕಾಲಿಕ ತಂಗುದಾಣವನ್ನು ನಿರ್ಮಿಸಲಾಯಿತು.
ನಿಲ್ದಾಣದಲ್ಲಿ ಖಾಸಗಿ ಹಾಗೂ ರಾಜ್ಯ ರಸ್ತೆ ಸಾರಿಗೆ, ಬಸ್‌ಗಳ ನಿಲುಗಡೆಗೆ ಕಿಷ್ಕಿಂದೆಯಾಗಿತ್ತು. ಹಲವು ಬಾರಿ ರಾಜ್ಯ ರಸ್ತೆ ಸಾರಿಗೆ ಹಾಗೂ ಖಾಸಗಿ ಚಾಲಕರ ನಡುವೆ ದಿನನಿತ್ಯ ಜಟಾಪಟಿ ಸಾಮಾನ್ಯವಾಗಿತ್ತು. ಪ್ರಸ್ತುತ ಇರುವ ತಾತ್ಕಾಲಿಕ ಬಸ್ ನಿಲ್ದಾಣದಲ್ಲಿ ಶುಚಿತ್ವವಿಲ್ಲದೆ. ದೂಮಪಾನಿಗಳ, ಮದ್ಯವ್ಯಸನಿಗಳ ತಾಣವಾಗಿದೆ. ನಿಲ್ದಾಣದಲ್ಲಿ ರಾತ್ರಿಯಂತೂ ವಿದ್ಯುತ್ ದೀಪವಿದ್ದರೂ ಪುಂಡ ಪೋಕರಿಗಳು ನಿದ್ರೆ ಮಾಡುವ ಸ್ಥಳವಾಗಿದೆ.
ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ವೀರಾಜಪೇಟೆ-ಮಡಿಕೇರಿಯತ್ತ ತೆರಳುವ ಬಸ್‌ಗಳು ಮುಖ್ಯ ರಸ್ತೆಯ ಬದಿಯಲ್ಲಿಯೇ ನಿಲ್ಲಬೇಕಾಗಿದೆ. ಮೈಸೂರಿನತ್ತ ತೆರಳುವ ಬಸ್‌ಗಳು ಇಲ್ಲಿನ ರಿಫಾರ್‌ರ‍್ಸ್ ಕ್ಲಬ್ ಮುಂಭಾಗವೇ ನಿಲ್ಲುವಂತಾಗಿರುವುದರಿAದಾಗಿ ನಿಲ್ದಾಣದ ಮೇಲೆ ಅಧಿಕ ಒತ್ತಡ ಉಂಟಾಗಿ ಇತರ ಲಘುವಾಹನಗಳು, ಸರಕು ಸಾಗಾಟ ವಾಹನಗಳು, ಪಾದಚಾರಿಗಳು, ಶಾಲಾ–ಕಾಲೇಜು, ವಿದ್ಯಾರ್ಥಿಗಳು, ಪ್ರಯಾಣಿಕರು ನಿರಂತರ ಬವಣೆ ಅನುಭವಿಸಬೇಕಾಗಿ ಬಂದಿದೆ. -ಹೆಚ್.ಕೆ. ಜಗದೀಶ್