ಕುಶಾಲನಗರ, ಜ. ೧೨: ರೆಸಾರ್ಟ್ ಒಂದರಲ್ಲಿ ತಂಗಿದ್ದ ಯುವತಿಯೊಬ್ಬಳು ಸ್ನಾನ ಮಾಡುತ್ತಿದ್ದ ವೀಡಿಯೋವನ್ನು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿದ ಘಟನೆ ನಡೆದಿದೆ. ಕೊಪ್ಪ ಬಳಿಯ ರೆಸಾರ್ಟ್ನಲ್ಲಿ ಕೆಲಸ ಮಾಡುತ್ತಿದ್ದ ಸತೀಶ ಎಂಬಾತ ಈ ಕೃತ್ಯ ಎಸಗಿರುವುದಾಗಿ ತಿಳಿದು ಬಂದಿದೆ. ಪ್ರಕರಣದ ಬಗ್ಗೆ ಮೈಸೂರು ಪೊಲೀಸ್ ವರಿಷ್ಠಾಧಿಕಾರಿಗೆ ಮಾಹಿತಿ ತಲುಪಿದ್ದು, ಘಟನೆ ಬಗ್ಗೆ ತನಿಖೆ ನಡೆಸುವಂತೆ ಸ್ಥಳೀಯ ಪೊಲೀಸ್ ಠಾಣೆಗೆ ಆದೇಶಿಸಿದ್ದಾರೆ.

ಪ್ರವಾಸಕ್ಕೆಂದು ಬಂದಿದ್ದ ಕೇರಳ ಮೂಲದ ಕುಟುಂಬ ಸಮೀಪದ ಕೊಪ್ಪ ರೆಸಾರ್ಟ್ನಲ್ಲಿ ತಂಗಿದ್ದು, ಯುವತಿ ಸ್ನಾನ ಮಾಡುವ ಸಂದರ್ಭ ಅಲ್ಲಿನ ಸಿಬ್ಬಂದಿ ತನ್ನ ಮೊಬೈಲ್ ಮೂಲಕ ಯುವತಿಯ ನಗ್ನ ದೃಶ್ಯವನ್ನು ಚಿತ್ರೀಕರಣ ಮಾಡಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಗಮನಿಸಿದ ಯುವತಿ ಕಿರುಚಿಕೊಂಡಾಗ ತಕ್ಷಣ ಆಕೆಯ ಕುಟುಂಬ ಸತೀಶನನ್ನು ಹಿಡಿದು ಸ್ಥಳೀಯರ ಸಹಕಾರದೊಂದಿಗೆ ಆತನ ಮೊಬೈಲ್ ವಶಕ್ಕೆ ಪಡೆದುಕೊಂಡಿದೆ. ನಂತರ ಮೊಬೈಲ್‌ನಲ್ಲಿ ಯುವತಿಯ ನಗ್ನ ದೃಶ್ಯಾವಳಿ ಕಂಡುಬAದಿದೆ. ಆರೋಪಿಗೆ ಸಾರ್ವಜನಿಕರು ಧರ್ಮದೇಟು ನೀಡಿದ್ದು, ಈ ಸಂದರ್ಭ ಆರೋಪಿ ಸತೀಶ ತಪ್ಪೊಪ್ಪಿಕೊಂಡಿದ್ದಾನೆ. ಪ್ರವಾಸಿ ಕುಟುಂಬ ಯಾವುದೇ ದೂರು ನೀಡದೆ ತಮ್ಮ ಊರಿಗೆ ಹಿಂತಿರುಗಿದೆ.

ಘಟನೆ ಬಗ್ಗೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಲಭ್ಯವಾದ ಮಾಹಿತಿ ಮೇರೆಗೆ ತನಿಖೆ ನಡೆಯುತ್ತಿದೆ. - ಸಿಂಚು