ಕರಿಕೆ, ಜ. ೧೨: ಇಲ್ಲಿಗೆ ಸಮೀಪದ ಚೆತ್ತುಕಾಯ, ಪಚ್ಚೆಪಿಲಾವು ಹಾಗೂ ಹದಿಮೂರನೇ ಮೈಲು ವ್ಯಾಪ್ತಿಯಲ್ಲಿ ಕಾಡಾನೆಗಳು ಊರಿಗೆ ಪ್ರವೇಶ ಮಾಡದಂತೆ ಆನೆ ತಡೆ ಕಂದಕ ನಿರ್ಮಾಣ ಮಾಡಲಾಯಿತು.

ಮಡಿಕೇರಿ ಅರಣ್ಯ ಉಪವಿಭಾಗದ ಭಾಗಮಂಡಲ ವಲಯ ಕರಿಕೆ ಉಪ ವಲಯಕ್ಕೊಳಪಟ್ಟ ಪಟ್ಟಿಘಾಟ್ ಮೀಸಲು ಅರಣ್ಯದಂಚಿನ ಗ್ರಾಮದ ಗಡಿಯಲ್ಲಿ ಕಾಡಾನೆ ಉಪಟಳದಿಂದ ರೈತರು ಬೆಳೆದ ಅಡಿಕೆ, ತೆಂಗು, ಗೇರು, ರಬ್ಬರ್, ಬಾಳೆ ಸೇರಿದಂತೆ ಇತರ ಕೃಷಿ ನಾಶವಾಗುತ್ತಿದ್ದು, ಈ ಬಗ್ಗೆ ಗ್ರಾಮಸ್ಥರು ಈ ಹಿಂದೆ ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷರಾಗಿದ್ದ ಶಾಂತೆಯAಡ ರವಿ ಕುಶಾಲಪ್ಪ ಅವರಿಗೆ ಆನೆ ಕಂದಕ ನಿರ್ಮಿಸುವಂತೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆ ಕಾರ್ಯಪಡೆ ಅಧ್ಯಕ್ಷರು ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಆನೆ ಕಂದಕ ನಿರ್ಮಿಸಲು ಕ್ರಮ ವಹಿಸುವಂತೆ ಸೂಚಿಸಿದ್ದರು. ಇದಕ್ಕೆ ಸ್ಪಂದಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ. ಪೂವಯ್ಯ ಅವರು ಆನೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸುಮಾರು ಒಂದು ಸಾವಿರ ಮೀಟರ್ ಆನೆ ಕಂದಕ ನಿರ್ಮಾಣಕ್ಕೆ ಮಂಜೂರು ನೀಡಿದ್ದು, ಇದೀಗ ಕಾಮಗಾರಿ ಮುಕ್ತಾಯ ಹಂತದಲ್ಲಿದೆ.