ಮಡಿಕೇರಿ, ಜ. ೧೩: ಒತ್ತುವರಿಯಾದ ಜಾಗವನ್ನು ಗುತ್ತಿಗೆ ಆಧಾರದಲ್ಲಿ ನೀಡುವ ಕ್ರಮ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಗರದಲ್ಲಿ ಆದಿವಾಸಿ ಕೃಷಿ ಕಾರ್ಮಿಕರ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.
ನಗರದ ಫೀ.ಮಾ. ಕಾರ್ಯಪ್ಪ ವೃತ್ತದಿಂದ ಆರಂಭಗೊAಡ ಪ್ರತಿಭಟನಾ ಮೆರವಣಿಗೆ ಜಿಲ್ಲಾಡಳಿತ ಭವನದವರೆಗೆ ಸಾಗಿತು. ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು
ಸರ್ಕಾರ ಅರಣ್ಯ ಇಲಾಖೆಯಿಂದ ಹಿಂಪಡೆಯುವ ೨ ಲಕ್ಷ ಎಕರೆ ಜಾಗವನ್ನು ಕಂದಾಯ ಭೂಮಿಯಾಗಿ ಪರಿವರ್ತಿಸಿ ದಲಿತ ಆದಿವಾಸಿಗಳಿಗೆ, ಕೃಷಿ ಕಾರ್ಮಿಕರಿಗೆ ತಲಾ ೩ ಎಕರೆಗಳಂತೆ ಹಂಚಬೇಕು. ಉಳ್ಳವರಿಗೆ ಭೂಮಿ ಗುತ್ತಿಗೆ ನೀಡುವುದನ್ನು ರದ್ದುಗೊಳಿಸಿ ಭೂಹೀನರಿಗೆ ಹಕ್ಕುಪತ್ರ ನೀಡಬೇಕು. ಮಲೆನಾಡಿಗೆ ಭೂಮಿ ಕಾಯ್ದೆ ಜಾರಿಗೊಳಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಡಿ.ಹೆಚ್. ಪೂಜಾರ್ ಮಾತನಾಡಿ, ವಸತಿ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಮುತುವರ್ಜಿ ವಹಿಸಬೇಕು. ೫೦ ಸಾವಿರ ಆದಿವಾಸಿಗಳು ಲೈನ್ಮನೆಗಳಲ್ಲಿ ವಾಸವಿದ್ದು, ಜಿಲ್ಲೆಯ ಜನಪ್ರತಿನಿಧಿಗಳು ಅವರ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿಲ್ಲ. ಇದೇ ಧೋರಣೆ ಮುಂದುವರಿದಲ್ಲಿ ಹೋರಾಟದ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಕಾರ್ಯದರ್ಶಿ ಡಿ.ಎಸ್.ನಿರ್ವಾಣಪ್ಪ, ಜಿಲ್ಲಾ ಕಾರ್ಯದರ್ಶಿ ಜೆ.ಎಂ. ಸುರೇಶ್, ಮುಖಂಡರಾದ ವೈ.ಎಂ. ಸುರೇಶ್, ಅನಿತಾ, ಜಿಲ್ಲಾ ಸಮಿತಿ ಸದಸ್ಯರಾದ ಮೋಹನ ವೈ.ಪಿ. ಹೆಚ್.ಜೆ ಪ್ರಕಾಶ್, ರಘು ಜಿ.ಕೆ. ಬಾಬು ಕೆ.ಎ. ಮತ್ತಿತರರು ಪಾಲ್ಗೊಂಡಿದ್ದರು.