ಸಿದ್ದಾಪುರ, ಜ. ೧೩: ಪರಿಶಿಷ್ಟ ವರ್ಗದ ಯುವತಿಯೋರ್ವಳ ಮಾನಭಂಗಕ್ಕೆ ಯತ್ನಿಸಿದ ಆರೋಪದಡಿ ಮೂವರು ವಿವಾಹಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ನೆಲ್ಯಹುದಿಕೇರಿ ಗ್ರಾಮದ ನಲ್ವತ್ತೇಕರೆ ನಿವಾಸಿಯಾಗಿರುವ ಶೌಕತ್ (೩೫) ಎಂಬಾತನ ಮೊಬೈಲ್ ಅಂಗಡಿಗೆ ೧೯ ವರ್ಷದ ಯುವತಿಯೋರ್ವಳು ತನ್ನ ಮೊಬೈಲ್ಗೆ ರೀಚಾರ್ಜ್ ಮಾಡಲು ಗುರುವಾರ ಸಂಜೆ ಹೋಗಿದ್ದಳು. ಈಕೆ ರೀಚಾರ್ಜ್ ಮಾಡಿಸಿ ತನ್ನ ಮನೆಗೆ ಹಿಂತಿರುಗಿ ಬಂದಿದ್ದಾಳೆ. ಇದಾದ ಬಳಿಕ ಮೊಬೈಲ್ ಅಂಗಡಿಯ ಮಾಲೀಕ ಶೌಕತ್ ಈ ಯುವತಿಯ ಮೊಬೈಲ್ ಸಂಖ್ಯೆಯನ್ನು ತನ್ನ ಸ್ನೇಹಿತರಾದ ನೆಲ್ಯಹುದಿಕೇರಿ ನಲ್ವತ್ತೇಕರೆ ನಿವಾಸಿಗಳಾದ ಅಬ್ದುಲ್ ಮುನಾಫ್ (೩೩) ಹಾಗೂ ಅಶ್ರಫ್ (೩೫) ಎಂಬಿಬ್ಬರಿಗೆ ನೀಡಿದ್ದಾನೆ. ಇವರಿಬ್ಬರು ಸೇರಿ ಈ ಯುವತಿಯ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ನಂತರ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾರೆ. ಇದಾದ ನಂತರ ಕಾರಿನಲ್ಲಿ ಆಕೆಯ ಮನೆಗೆ ತೆರಳಿ ಆಕೆಯ ಕೈ ಹಿಡಿದು ಎಳೆದು ಮಾನಭಂಗಕ್ಕೆ ಯತ್ನಿಸಿ ಜಾತಿ ನಿಂದನೆ ಮಾಡಿದ್ದಾರೆಂದು ಯುವತಿಯು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಗುರುವಾರ ರಾತ್ರಿ ವಿವಾಹಿತರಾಗಿರುವ ಮೊಬೈಲ್ ಅಂಗಡಿ ಮಾಲೀಕ ಶೌಕತ್ ಹಾಗೂ ಈತನ ಸ್ನೇಹಿತರಾದ ಅಬ್ದುಲ್ ಮುನಾಫ್ ಮತ್ತು ಅಶ್ರಫ್ ಈ ಮೂವರು ಆರೋಪಿಗಳನ್ನು ಬಂದಿಸಿದರು. ಇವರ ವಿರುದ್ಧ ಜಾತಿ ನಿಂದನೆ ಸೇರಿ ವಿವಿಧ ಪ್ರಕರಣಗಳನ್ನು ದಾಖಲಿಸಿಕೊಂಡು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಜಾತಿ ನಿಂದನೆ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಮಡಿಕೇರಿ ವಿಭಾಗದ ಡಿ.ವೈ.ಎಸ್.ಪಿ ಗಜೇಂದ್ರ ಪ್ರಸಾದ್ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.