ಕುಶಾಲನಗರ, ಜ. ೧೨: ದುಬಾರೆ ಶಿಬಿರದಲ್ಲಿ ಕಾಡಾನೆ ದಾಳಿಯಿಂದ ತೀವ್ರ ಗಾಯಗೊಂಡಿರುವ ದಸರಾ ಪಟ್ಟದಾನೆ ಗೋಪಿಗೆ ವನ್ಯಜೀವಿ ತಜ್ಞರ ತಂಡ ಚಿಕಿತ್ಸೆ ಮುಂದುವರಿದಿದೆ. ಡಾ. ಚಿಟ್ಟಿಯಪ್ಪ ನೇತೃತ್ವ ತಜ್ಞರ ತಂಡ ಗೋಪಿ ಆನೆಗೆ ಚಿಕಿತ್ಸೆ ನೀಡುತ್ತಿದ್ದು, ಚೇತರಿಸಿಕೊಳ್ಳಲು ಇನ್ನು ಕೆಲವು ಸಮಯ ಅಗತ್ಯವಿದೆ ಎಂದು ಕುಶಾಲನಗರ ವಲಯ ಅರಣ್ಯ ಅಧಿಕಾರಿ ಕೆ.ವಿ ಶಿವರಾಂ ತಿಳಿಸಿದ್ದಾರೆ.
ಆನೆ ದಾಳಿಯಿಂದ ಗೋಪಿಯ ಕಿವಿ, ಬಾಯಿ ಭಾಗಕ್ಕೆ ಸೊಂಡಿಲಿಗೆ ತೀವ್ರ ಪೆಟ್ಟಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆನೆಯ ಮಾವುತ ನವೀನ್ ಮತ್ತು ಕಾವಾಡಿಗ ಶಿವು ಅವರುಗಳು ಆನೆಯ ಪರಿಸ್ಥಿತಿ ಕಂಡು ಕಣ್ಣೀರು ಸುರಿಸುತ್ತಿರುವ ದೃಶ್ಯ ಗೋಚರಿಸಿದೆ. ಗಾಯಗೊಂಡ ಗೋಪಿ ೯ ಬಾರಿ ಮೈಸೂರು ದಸರಾದಲ್ಲಿ ಪಾಲ್ಗೊಂಡಿದೆ ಎಂದು ಶಿಬಿರದ ಉಸ್ತುವಾರಿ ಅಧಿಕಾರಿ ಕನ್ನಂಡ ರಂಜನ್ ತಿಳಿಸಿದ್ದಾರೆ.
ಶಿಬಿರದ ಎಲ್ಲಾ ಆನೆಗಳ ಪೈಕಿ ಗೋಪಿ ತನಗೆ ಇಷ್ಟವಾದ ಆನೆಯಾಗಿದ್ದು, ಗೋಪಿ ಆನೆ ಇತ್ತೀಚೆಗಷ್ಟೇ ಮೂಡಿಗೆರೆ ಆನೆ ಸೆರೆ ಕಾರ್ಯಾಚರಣೆಯಲ್ಲಿ ಕೂಡ ಪಾಲ್ಗೊಂಡಿತ್ತು. ನಂತರ ಗೋಪಿಗೆ ಮದ ಬಂದ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ಶಿಬಿರದಲ್ಲಿ ಕಟ್ಟಿ ಹಾಕಲಾಗಿತ್ತು ಈ ಸಂದರ್ಭ ಕಾಡಾನೆ ದಾಳಿ ನಡೆದಿದೆ ಎಂದು ರಂಜನ್ ತಿಳಿಸಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಹುಣಸೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿಎನ್‌ಎನ್ ಮೂರ್ತಿ, ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ. ಪೂವಯ್ಯ ದುಬಾರೆ ಶಿಬಿರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದರು. ಗುರುವಾರ ಸಂಜೆ ವೇಳೆಗೆ ಕಾಡಾನೆ ಮಾಲ್ದಾರೆ ಅರಣ್ಯದತ್ತ ತೆರಳಿದೆ ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ.ವಿ. ಶಿವರಾಮ್ ತಿಳಿಸಿದ್ದಾರೆ.