ಮಡಿಕೇರಿ, ಜ. ೧೩: ಪ್ರಸಕ್ತ ಸಾಲಿನಲ್ಲಿ ನಡೆಯುವ ಎಸ್.ಎಸ್. ಎಲ್.ಸಿ. ಪರೀಕ್ಷಾ ಫಲಿತಾಂಶ ಹೆಚ್ಚಳಕ್ಕೆ ಶಿಕ್ಷಕರು, ಮುಖ್ಯ ಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಿಆರ್ಸಿಗಳು ಹೀಗೆ ಎಲ್ಲರೂ ಶ್ರಮಿಸುವಂತೆ ಜಿ.ಪಂ. ಸಿಇಓ ಡಾ. ಎಸ್. ಆಕಾಶ್ ಅವರು ನಿರ್ದೇಶನ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ವತಿಯಿಂದ ‘ಎಸ್.ಎಸ್.ಎಲ್.ಸಿ. ಫಲಿತಾಂಶ ವಿಶ್ಲೇಷಣೆ ಮತ್ತು ಸುಧಾರಣೆ’ ಕುರಿತು ಪ್ರೌಢಶಾಲಾ ಮುಖ್ಯ ಶಿಕ್ಷಕರ ಜೊತೆ ಬುಧವಾರ ನಡೆದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಳೆದ ಬಾರಿ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಕೊಡಗು ಜಿಲ್ಲೆ ೧೧ ನೇ ಸ್ಥಾನ ಪಡೆದಿತ್ತು, ಈ ಬಾರಿ ೩ ನೇ ಸ್ಥಾನದೊಳಗೆ ಫಲಿತಾಂಶ ಬರುವಂತೆ ಗುಣಮಟ್ಟದ ಕಲಿಕೆಗೆ ಎಲ್ಲರೂ ಶ್ರಮಿಸಬೇಕು ಎಂದರು. ಮಕ್ಕಳ ಕಲಿಕೆಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಿದ್ಧತೆ ಮತ್ತು ಆತ್ಮವಿಶ್ವಾಸ ಹೆಚ್ಚಿಸಲು ರಾಜ್ಯ ಮಟ್ಟದ ಎಸ್.ಎಸ್.ಎಲ್.ಸಿ. ಪೂರ್ವ ಸಿದ್ಧತಾ ಪರೀಕ್ಷೆಗೂ ಮೊದಲು ಜನವರಿ ಕೊನೆ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಜಿಲ್ಲಾ ಮಟ್ಟದ ಎಸ್.ಎಸ್.ಎಲ್.ಸಿ. ಪೂರ್ವ ಸಿದ್ಧತಾ ಪರೀಕ್ಷೆ ನಡೆಸುವಂತೆ ಸಲಹೆ ಮಾಡಿದರು.
ಮಕ್ಕಳ ಕಲಿಕೆಗೆ ವಿಶೇಷ ತರಗತಿ ನಡೆಸುವುದರ ಜೊತೆಗೆ ಪಾಠ ಪ್ರವಚನಗಳನ್ನು ಪೂರ್ಣಗೊಳಿಸಿ, ಮತ್ತೆ ಮನನ ಮಾಡುವಂತಾಗಬೇಕು ಎಂದರು. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.೧೦೦ ರಷ್ಟು ಫಲಿತಾಂಶ ಪಡೆದ ಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರಿಗೆ ಜಿ.ಪಂ. ವತಿಯಿಂದ ಅಭಿನಂದನೆ ಸಲ್ಲಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಅವರು ಪ್ರಕಟಿಸಿದರು.
‘ವಿದ್ಯಾರ್ಥಿಗಳು ಪ್ರತೀ ನಿತ್ಯ ಬರವಣಿಗೆ ಕೌಶಲ್ಯ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಮಾಹಿತಿ ನೀಡಬೇಕು. ಯಾವುದಾದರೂ ಶಾಲೆಗಳಲ್ಲಿ ಮಧ್ಯಂತರದಲ್ಲಿ ಶಿಕ್ಷಕರು ನಿವೃತ್ತರಾಗಿದ್ದಲ್ಲಿ ಮಾಹಿತಿ ನೀಡಬೇಕು. ಪಾಠ ಪ್ರವಚನಕ್ಕೆ ಯಾವುದೇ ರೀತಿಯ ತೊಂದರೆ ಯಾಗದಂತೆ ಗಮನಹರಿಸಬೇಕು ಎಂದು ಡಾ. ಆಕಾಶ್ ಸೂಚಿಸಿದರು.’ ದತ್ತು ವಹಿಸಿಕೊಂಡಿರುವ ಶಾಲೆಗಳ ಶಿಕ್ಷಕರು, ಮುಖ್ಯೋಪಾಧ್ಯಾಯರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಫಲಿತಾಂಶಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ರಂಗಧಾಮಯ್ಯ ಅವರು ಮಾತನಾಡಿ, ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶದಲ್ಲಿ, ಈ ಬಾರಿ ೧೦ ಸ್ಥಾನದೊಳಗೆ ಪರೀಕ್ಷಾ ಫಲಿತಾಂಶ ಪಡೆಯಲು ಶ್ರಮಿಸಲಾಗುವುದು ಎಂದರು. ಎಸ್.ಎಸ್.ಎಲ್.ಸಿ. ಪರೀಕ್ಷೆ ಸಂಬAಧ ಸರ್ಕಾರದ ನಿರ್ದೇಶನ ಗಳನ್ನು ಕಾಲ ಕಾಲಕ್ಕೆ ಅನುಷ್ಠಾನ ಗೊಳಿಸಲಾಗುತ್ತಿದೆ. ಜೊತೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಮುಖ್ಯೋಪಾಧ್ಯಾಯರ ಜೊತೆ ಸಂವಾದ, ಪೋಷಕರ ಸಭೆ ಹೀಗೆ ಹಲವು ಚಟುವಟಿಕೆಗಳನ್ನು ಕೈಗೊಳ್ಳಲಾಗಿದ್ದು, ಪರೀಕ್ಷಾ ಫಲಿತಾಂಶ ಹೆಚ್ಚಳಕ್ಕೆ ಅಗತ್ಯ ಕ್ರಮವಹಿಸಲಾಗುವುದು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆ.ವಿ. ಸುರೇಶ್ (ಸೋಮವಾರಪೇಟೆ) ಅವರು ಮಾತನಾಡಿ ಸೋಮವಾರ ಪೇಟೆ ಮತ್ತು ಕುಶಾಲನಗರ ತಾಲೂಕಿನಲ್ಲಿ ಮೊದಲ ಬಾರಿಗೆ ಪರೀಕ್ಷೆ ಬರೆಯುವವರಿಂದ ಉತ್ತಮ ಫಲಿತಾಂಶ ಬರುತ್ತದೆ ಎಂದು ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್ (ಮಡಿಕೇರಿ) ಮಡಿಕೇರಿ ತಾಲೂಕಿನಲ್ಲಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಫಲಿತಾಂಶ ಉತ್ತಮವಾಗಿದೆ. ಅನುದಾನಿತ ಶಾಲೆಗಳಲ್ಲಿ ಪರೀಕ್ಷಾ ಫಲಿತಾಂಶ ಹೆಚ್ಚಳಕ್ಕೆ ಇನ್ನಷ್ಟು ಪ್ರಯತ್ನ ಮಾಡಲಾಗುವುದು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ (ವೀರಾಜಪೇಟೆ) ಶ್ರೀಶೈಲ ಬಿಳಗಿ ಅವರು, ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನಲ್ಲಿ ರಾಜ್ಯ ಸರಾಸರಿಗೆ ಹೋಲಿಕೆ ಮಾಡಿದರೆ ಹೆಚ್ಚಿನ ಫಲಿತಾಂಶವಿದೆ. ಆದರೂ ವಸತಿ ಶಾಲೆಗಳಲ್ಲಿ ಫಲಿತಾಂಶ ಹೆಚ್ಚಳಕ್ಕೆ ಮತ್ತಷ್ಟು ಪ್ರಯತ್ನ ಮಾಡಲಾಗುವುದು ಎಂದರು.
ಶಿಕ್ಷಣಾಧಿಕಾರಿ ಹಾಗೂ ಎಸ್ಎಸ್ಎಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ಡಾ. ಬಿ.ಸಿ. ದೊಡ್ಡೇಗೌಡ ಅವರು ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಕೈಗೊಂಡಿರುವ ಕ್ರಮಗಳು ಹಾಗೂ ಹಿಂದಿನ ಸಾಲಿನ ಪರೀಕ್ಷಾ ಫಲಿತಾಂಶ ವಿಶ್ಲೇಷಣೆ ಕುರಿತು ಮಾಹಿತಿ ನೀಡಿ, ಈ ಬಾರಿ ೬,೫೮೭ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿದ್ದು, ಇದರಲ್ಲಿ ೬,೩೦೩ ವಿದ್ಯಾರ್ಥಿಗಳು ಪ್ರಥಮ ಬಾರಿಗೆ ಪರೀಕ್ಷೆ ಬರೆಯಲಿದ್ದಾರೆ ಎಂದು ತಿಳಿಸಿದರು.
ಪೋಷಕರ ಸಭೆ, ಶಿಕ್ಷಕರಿಗೆ ಮಾರ್ಗದರ್ಶನ, ವಿದ್ಯಾರ್ಥಿ ಗಳೊಂದಿಗೆ ಸಂವಾದ, ವಿದ್ಯಾರ್ಥಿ ಗಳು ಪರೀಕ್ಷೆ ಸಮಯದಲ್ಲಿ ವಹಿಸಬೇಕಾದ ಧನಾತ್ಮಕ ಚಿಂತನೆ, ಭಯ ನಿವಾರಣೆ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ಮಾರ್ಗದರ್ಶನ, ಗುಂಪು ಕಲಿಕೆ, ಹೀಗೆ ವಿವಿಧ ಕಲಿಕಾ ಚಟುಚಟಿಕೆ ಗಳಿಗೆ ಒತ್ತು ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಶಾಲ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜಿಲ್ಲಾ ಉಪ ಯೋಜನಾಧಿಕಾರಿ ಕೃಷ್ಣಪ್ಪ, ವಿಷಯ ಪರಿವೀಕ್ಷಕರಾದ ಬಿಂದು, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸದಾಶಿವ ಪಲ್ಲೇದ್, ಡಯಟ್ ಉಪನ್ಯಾಸಕರು, ಮುಖ್ಯೋಪಾಧ್ಯಾಯರು ಇದ್ದರು.