ಮಡಿಕೇರಿ, ಜ. ೧೧: ಸಂಕಷ್ಟದಲ್ಲಿರುವ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆ ಕುರಿತಂತೆ ಚರ್ಚಿಸುವ ಸಲುವಾಗಿ ತಾ. ೧೮ ರಿಂದ ೨೨ ರವರೆಗೆ ರಾಜಧಾನಿ ಬೆಂಗಳೂರಿನಲ್ಲಿ ಸಿಐಟಿಯುನ ೧೭ನೇ ಅಖಿಲ ಭಾರತ ಸಮ್ಮೇಳನ ಏರ್ಪಡಿಸಲಾಗಿದೆ ಎಂದು ಸಮ್ಮೇಳನ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಪಿ.ಆರ್. ಭರತ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತ ನಡೆಸುತ್ತಿರುವ ಸರಕಾರಗಳು ರೈತರು ಹಾಗೂ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸದೆ ಕಡೆಗಣಿಸುತ್ತಿವೆ. ಎಲ್ಲ ಕ್ಷೇತ್ರಗಳನ್ನು ಖಾಸಗೀಕರಣ ಮಾಡುತ್ತಾ ಬಡವರ ಬಾಳಿಗೆ ಬೆಂಕಿಯಿಡುತ್ತಿವೆ. ಕಾರ್ಮಿಕರು, ಬಡವರ್ಗದ ಜನತೆ ಹಸಿವಿನಿಂದ ಬಳಲುತ್ತಿದ್ದಾರೆ. ಕೇಂದ್ರ ಸರಕಾರ ನೀಡಿದ ಭರವಸೆಯಂತೆ ಉದ್ಯೋಗ ನೀಡಲು ಸಾಧ್ಯವಾಗುತ್ತಿಲ್ಲ, ಬದಲಿಗೆ ಖಾಸಗೀಕರಣದ ಮೂಲಕ ಇರುವ ಹುದ್ದೆಯನ್ನು ಕಸಿದುಕೊಳ್ಳುತ್ತಿದ್ದು, ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಕಾರ್ಮಿಕರಿಗೆ ಕನಿಷ್ಟ ವೇತನ ಕೂಡ ನೀಡದೆ, ಹೊರಗುತ್ತಿಗೆ, ಏಜೆನ್ಸಿಗಳ ಮೂಲಕ ಶೋಷಣೆ ಮಾಡಲಾಗುತ್ತಿದೆ. ಅಸಂಘಟಿತ ನೌಕರರಿಗೆ ಸಾಮಾಜಿಕ ಭದ್ರತೆ ಇಲ್ಲದಂತಾಗಿದೆ. ಈ ಎಲ್ಲ ವಿಚಾರಗಳ ಬಗ್ಗೆ ಸಮ್ಮೇಳನದಲ್ಲಿ ಚರ್ಚೆ ಮಾಡಿ ಮುಂದಿನ ಹೋರಾಟದ ಬಗ್ಗೆ ರೂಪು ರೇಷೆ ತಯಾರಿಸಲಾಗುವದೆಂದು ಹೇಳಿದರು.

ಕೊಡಗು ಜಿಲ್ಲೆಯಲ್ಲಿಯೂ ಸಾಕಷ್ಟು ಸಮಸ್ಯೆಗಳಿವೆ. ಪ್ರಮುಖ ಬೆಳೆಗಳಾದ ಕಾಫಿ, ಕರಿಮೆಣಸಿಗೆ ಸೂಕ್ತ ಬೆಲೆ ಇಲ್ಲದೆ ಬೆಳೆಗಾರ ಸಂಕಷ್ಟದಲ್ಲಿದ್ದಾನೆ. ಕಾರ್ಮಿಕರಿಗೂ ಕೆಲಸ ಇಲ್ಲದೆ ಕಷ್ಟಪಡುವಂತಾಗಿದೆ. ವನ್ಯ ಜೀವಿಗಳ ಹಾವಳಿ, ಕಸ್ತೂರಿ ರಂಗನ್ ವರದಿ ಸೇರಿದಂತೆ ಇತರ ಜ್ವಲಂತ ಸಮಸ್ಯೆಗಳ ಬಗ್ಗೆಯೂ ಸಮ್ಮೇಳನದಲ್ಲಿ ಚರ್ಚೆಯಾಗಲಿವೆ. ಸಮ್ಮೇಳನದ ಜಾಥಾದಲ್ಲಿ ಒಂದು ಸಾವಿರ ಮಂದಿ ಹಾಗೂ ಪಥಸಂಚಲನದಲ್ಲಿ ನೂರು ಮಂದಿ ಜಿಲ್ಲೆಯಿಂದ ಪಾಲ್ಗೊಳ್ಳಲಿದ್ದಾರೆ ಎಂದು ಭರತ್ ಹೇಳಿದರು. ಪ್ರತಿ ಜಿಲ್ಲೆಗಳಲ್ಲಿ ಸ್ವಾಗತ ಸಮಿತಿ ರಚನೆ ಮಾಡಲಾಗಿದ್ದು, ಕೊಡಗು ಜಿಲ್ಲೆಯಲ್ಲಿಯೂ ಸಮಿತಿ ರಚನೆ ಮಾಡಲಾಗಿದೆ. ಅಧ್ಯಕ್ಷರಾಗಿ ಐ.ಆರ್. ಪ್ರಮೋದ್, ಗೌರವ ಅಧ್ಯಕ್ಷರಾಗಿ ವಿ.ಪಿ. ಶಶಿಧರ್ ಹಾಗೂ ಇತರ ಹಲವು ಹೋರಾಟಗಾರರನ್ನು ನೇಮಕ ಮಾಡಿಕೊಳ್ಳಲಾಗಿದೆ. ಸುಮಾರು ೨೫ ಸಾವಿರದಷ್ಟು ಕರಪತ್ರಗಳನ್ನು ಹಂಚಿ ಜಾಗೃತಿ ಮೂಡಿಸಲಾಗಿದೆ ಎಂದು ತಿಳಿಸಿದರು. ಸಮ್ಮೇಳನದಲ್ಲಿ ದೇಶದ ೩೦ ರಾಜ್ಯಗಳ ೨ ಸಾವಿರಕ್ಕೂ ಅಧಿಕ ಮಂದಿ ಹಾಗೂ ೪೦ ವಿವಿಧ ರಾಷ್ಟçಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಎ.ಸಿ. ಸಾಬು, ಖಜಾಂಚಿ ಎನ್.ಡಿ. ಕುಟ್ಟಪ್ಪ, ಉಪ ಕಾರ್ಯದರ್ಶಿ ರಾಚಪ್ಪಾಜಿ ಇದ್ದರು.