ಕುಶಾಲನಗರ, ಜ. ೧೧: ದುಬಾರೆ ಸಾಕಾನೆ ಶಿಬಿರಕ್ಕೆ ಪ್ರವಾಸಿಗರು ಕಾವೇರಿ ನದಿ ಮೂಲಕ ಕಾಲ್ನಡಿಗೆಯಲ್ಲಿ ತೆರಳಲು ಅನುಕೂಲವಾಗುವಂತೆ ಮರಳು ಮೂಟೆ ಹಾಕಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗಿದೆ. ‘ಶಕ್ತಿ’ಯಲ್ಲಿ ಇತ್ತೀಚಿಗೆ ಪ್ರಕಟವಾದ ವರದಿಗೆ ಸ್ಪಂದಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ನದಿಗೆ ಅಡ್ಡಲಾಗಿ ಮರಳು ಮೂಟೆ ಹಾಕುವ ಮೂಲಕ ಪ್ರವಾಸಿಗರಿಗೆ ನದಿ ದಾಟಲು ಅನುಕೂಲ ಕಲ್ಪಿಸಿದ್ದಾರೆ.

ಕಾವೇರಿ ನದಿಯಲ್ಲಿ ನೀರಿನ ಹರಿವು ಕ್ಷೀಣಗೊಂಡ ಕಾರಣ ನಂಜರಾಯಪಟ್ಟಣ ಭಾಗದಿಂದ ದುಬಾರೆಗೆ ತೆರಳಲು ಬೋಟ್ ವ್ಯವಸ್ಥೆ ರದ್ದುಗೊಂಡ ಹಿನ್ನೆಲೆಯಲ್ಲಿ ಪ್ರವಾಸಿಗರು ಸಾಕಾನೆ ಶಿಬಿರಕ್ಕೆ ನದಿಯನ್ನು ಕಾಲ್ನಡಿಗೆ ಮೂಲಕ ದಾಟಬೇಕಾಗಿದೆ. ವಾರಾಂತ್ಯದಲ್ಲಿ ಸಾವಿರಕ್ಕೂ ಅಧಿಕ ಸಂಖ್ಯೆಯ ಪ್ರವಾಸಿಗರು ಸಾಕಾನೆ ಶಿಬಿರಕ್ಕೆ ಭೇಟಿ ನೀಡುತ್ತಿದ್ದು, ಈ ಸಂದರ್ಭ ನದಿಯಲ್ಲಿ ಕೆಲವೆಡೆ ಬಂಡೆ ಕಲ್ಲುಗಳ ನಡುವೆ ನದಿ ದಾಟಲು ಮಕ್ಕಳು, ವೃದ್ಧರಿಗೆ ಅನಾನುಕೂಲ ಉಂಟಾಗುತ್ತಿತ್ತು. ಹಲವು ಬಾರಿ ಜಾರಿ ಬಿದ್ದು ಗಾಯಗೊಂಡಿರುವ ಪ್ರಕರಣಗಳ ಜೊತೆಗೆ ಅಮೂಲ್ಯ ವಸ್ತುಗಳು ಹಾನಿಗೊಳಗಾಗುತ್ತಿದ್ದವು. ತಾತ್ಕಾಲಿಕ ಸೇತುವೆ ನಿರ್ಮಾಣಕ್ಕೆ ಸ್ಥಳೀಯರಿಂದ ಆಗ್ರಹ ಕೇಳಿ ಬಂದಿತ್ತು. ಇನ್ನೊಂದೆಡೆ ತೂಗು ಸೇತುವೆ ನಿರ್ಮಾಣ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸುವAತೆ ಪ್ರವಾಸಿಗರು ಒತ್ತಾಯಿಸಿದ್ದರು.

ನದಿ ದಾಟುವ ಸಂದರ್ಭ ಪೋಷಕರು ಮಕ್ಕಳ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ. ವಿ. ಶಿವರಾಂ ‘ಶಕ್ತಿ’ ಮೂಲಕ ಕೋರಿದ್ದಾರೆ.