ವೀರಾಜಪೇಟೆ ಕಾವೇರಿ ಆಶ್ರಮ
ಕೊಡಗು ಜಿಲ್ಲೆ ಅಧ್ಯಾತ್ಮಿಕ ಕ್ಷೇತ್ರದಲ್ಲಿ ಬರಡು ಭೂಮಿ ಆಗಿದ್ದ ಕಾಲದಲ್ಲಿ ಶತಮಾನದ ಹಿಂದೆ ಕೊಡವ ಕುಲದ ಪಳಂಗAಡ ಅಪ್ಪಯ್ಯ ಅವರು ಅಧ್ಯಾತ್ಮಿಕದತ್ತ ಒಲವು ತೋರಿ ಅಧ್ಯಾತ್ಮ ಸಾಧನೆಯಲ್ಲಿ ಮೇರು ಗಿರಿಗೇರಿದ ಮಹಾ ಸಂತರು. ಮಾನವ ಕೋಟಿಯ ಮೇಲೆ ಕರುಣೆ ತಾಳಿ ಮಾನವರ ಸೇವೆಗಾಗಿ ಧರೆಗಿಳಿದು ಬಂದು, ತಮ್ಮ ಬಾಳನ್ನು ಸಮಾಜ ಸೇವೆಗೆ ಮೀಸಲಿಟ್ಟ ಮಹಾ ತ್ಯಾಗಿಗಳಾಗಿದ್ದು, ಕೊಡಗಿನ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಲಿಖಿತವಾಗಿ ಅಧ್ಯಾತ್ಮ ಜ್ಯೋತಿ ಪ್ರಜ್ವಲಿಸಿತು.
ಈ ಸದ್ಗುರುಗಳ ಪುತ್ರರಾಗಿ ೧೨.೧.೧೯೨೩ ರಲ್ಲಿ ಜನಿಸಿದ ಶ್ರೀ ವಿವೇಕಾನಂದ ಶರಣ ಸ್ವಾಮೀಜಿ ಸದ್ಗುರು ತಂದೆಯವರ ನೆರಳಿನಲ್ಲಿ ಸನಾತನ ಧರ್ಮಾವಲಂಭಿಗಳಾಗಿ ಅಧ್ಯಾತ್ಮ ಶಿಖರವನ್ನೇರಿ, ಸಮಾಜಮುಖಿಯಾಗಿ, ಧರ್ಮಪಾಲಕರಾಗಿ, ನಾಡಿನ ಲಕ್ಷಾಂತರ ಮಂದಿಯ ದಾರಿ ದೀಪವಾಗಿ, ಧಾರ್ಮಿಕ ಕೇಂದ್ರ ಶ್ರೀ ಕಾವೇರಿ ಆಶ್ರಮದ ಗುರುವಂದ್ಯರಾಗಿ, ಕೊಡಗಿನಲ್ಲಿ ಧಾರ್ಮಿಕ ಪ್ರಜ್ಞೆ ಬೆಳೆಸಿದವರು.
ಸನ್ಮಾರ್ಗ ಪ್ರವರ್ತಕರಾಗಿ, ಬಡ ಮಕ್ಕಳ ಏಳಿಗೆಗಾಗಿ, ಮೌಲ್ಯಯುತ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಪೋಷಿಸಿ, ಸಮಾಜಕ್ಕೆ ಆದರ್ಶ ಪ್ರಿಯರಾಗಿ, ಈ ಪವಿತ್ರ ಕಾವೇರಿ ನಾಡನ್ನು ಸುಜ್ಞಾನದ ಶಿಖರಕ್ಕೇರಿಸುವಲ್ಲಿ ಒಂದು ನೂರು ವರ್ಷ ದುಡಿದ ಮಹಾತ್ಯಾಗಿಗಳಾಗಿರುವರು. ಇಂದು ತಮ್ಮ ಶತಾಬ್ದಿಯನ್ನು ಆಚರಿಸುತ್ತಿರುವುದು ಕೊಡಗಿನ ಸಮಸ್ತ ಜನರಿಗೆ ಸಂತಸದ ದಿನವಾಗಿದೆ.
ಗುರು ಸ್ವಾಮೀಜಿ ಅವರ ಗುಣಾದರ್ಶಗಳನ್ನು ಮೈಗೂಡಿಸಿಕೊಂಡು ಅವರ ಹೆಜ್ಜೆ ಗುರುತನ್ನು ಅನುಸರಿಸಿ ನಾವು ಕೂಡ ಹೆಜ್ಜೆಯಿಕ್ಕಲು ಈ ಶುಭ ಮುಹೂರ್ತದಲ್ಲಿ ದೀಕ್ಷಾ ಬದ್ಧರಾಗೋಣ.
ಕಾರ್ಯಕ್ರಮ
ಶ್ರೀ ವಿವೇಕಾನಂದ ಶರಣ ಸ್ವಾಮೀಜಿಯ ಶತಮಾನೋತ್ಸವ ಸಮಾರಂಭ ಇಂದು ವೀರಾಜಪೇಟೆಯ ಕಾವೇರಿ ಆಶ್ರಮದಲ್ಲಿ ನಡೆಯಲಿದೆ. ಬೆಂಗಳೂರಿನ ಓಂಕಾರಾಶ್ರಮದ ಪೀಠಾದಿಪತಿಗಳಾದ ಶ್ರೀ ಆಚಾರ್ಯ ಮಹಾ ಮಂಡಲೇಶ್ವರ ಮಧು ಸೂದನಾನಂದಪುರಿ ಸ್ವಾಮೀಜಿ ಪ್ರವಚನ ನೀಡಲಿದ್ದಾರೆ. ಪ್ರಾತಃಕಾಲ ೭ ಗಂಟೆಗೆ ಶ್ರೀ ಗಣಪತಿ ಹೋಮ ಹಾಗೂ ಮೃತ್ಯುಂಜಯ ಹೋಮ ನಡೆಯಲಿದ್ದು, ಅಪರಾಹ್ನ ೧ ಗಂಟೆಗೆ ಮಹಾ ಮಂಗಳಾರತಿ, ಸಂಜೆ ೫.೩೦ ರಿಂದ ಮೈಸೂರಿನ ಹರಿಕಥಾ ವಿಧುಷಿ ಡಾ. ವಿ. ಮಾಲಿನ ಅಯ್ಯರ್ ಅವರಿಂದ ಹರಿಕತೆ ನಡೆಯಲಿದೆ.
- ಬಾಚರಣಿಯಂಡ ಪಿ. ಅಪ್ಪಣ್ಣ, ಕುಶಾಲನಗರ.