ಕುಶಾಲನಗರ, ಜ. ೧೧: ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಮೂರು ಪಟ್ಟಣಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆಗೆ ಸರಕಾರ ರೂ. ೭೫ ಕೋಟಿ ಅನುದಾನ ಕಲ್ಪಿಸಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.
ಕುಶಾಲನಗರ ಪುರಸಭೆ ವ್ಯಾಪ್ತಿಯ ವಾರ್ಡ್ಗಳಲ್ಲಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ ಹಂತ -೪ ಕಾಮಗಾರಿಗಳಿಗೆ ಮತ್ತು ೧೫ನೇ ಹಣಕಾಸು ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮಡಿಕೇರಿ, ಕುಶಾಲನಗರ, ಸೋಮವಾರಪೇಟೆ ಪಟ್ಟಣಗಳಲ್ಲಿ ೨೦೫೦ ರ ಜನಸಂಖ್ಯೆ ಅಂದಾಜು ಪಟ್ಟಿ ಪ್ರಕಾರ ಈ ಯೋಜನೆ ರೂಪಿಸಲಾಗಿದೆ. ಕಾವೇರಿ ನದಿಯಿಂದ ನೀರು ಹಾಯಿಸುವ ಮೂಲಕ ಈ ಯೋಜನೆಗೆ ಸದ್ಯದಲ್ಲೇ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದರು. ಮಡಿಕೇರಿ ಪಟ್ಟಣಕ್ಕೆ ರೂ. ೨೦ ಕೋಟಿ, ಕುಶಾಲನಗರ ಪಟ್ಟಣಕ್ಕೆ ರೂ. ೪೦ ಕೋಟಿ ಮತ್ತು ಸೋಮವಾರಪೇಟೆ ಪಟ್ಟಣಕ್ಕೆ ರೂ. ೧೫ ಕೋಟಿ ಅನುದಾನ ಸರ್ಕಾರ ಒದಗಿಸಲಿದೆ. ಕುಶಾಲನಗರ ಪಟ್ಟಣದ ಬಡಾವಣೆಗಳ ವಿವಿಧ ಕಾಮಗಾರಿಗಳಿಗೆ ಒಟ್ಟು ರೂ. ೫ ಕೋಟಿ ೬೪ ಲಕ್ಷ ಒದಗಿಸಲಾಗಿದೆ ಎಂದರು.
ಕುಶಾಲನಗರದ ವಿವೇಕಾನಂದ ಬಡಾವಣೆ, ಕಾಳಮ್ಮ ಕಾಲೋನಿ, ಶೈಲಜ ಬಡಾವಣೆ, ಬಾಪೂಜಿ ಬಡಾವಣೆ, ಓಂಕಾರ್ ಬಡಾವಣೆ ಸೇರಿದಂತೆ ಪಟ್ಟಣದ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಚರಂಡಿ ನಿರ್ಮಾಣ, ಲಿಂಕ್ ರಸ್ತೆ ಅಭಿವೃದ್ಧಿ, ಪಾದಚಾರಿ ರಸ್ತೆ ಅಭಿವೃದ್ಧಿ ಮತ್ತಿತರ ಕಾಮಗಾರಿ ಸೇರಿದಂತೆ ಒಟ್ಟು ರೂ. ೫ ಕೋಟಿ ವೆಚ್ಚದ ಕಾಮಗಾರಿಗೆ ಶಾಸಕರು ಭೂಮಿಪೂಜೆ ನೆರವೇರಿಸಿದರು.
೨೦೨೨-೨೩ನೇ ಸಾಲಿನ ೧೫ನೇ ಹಣಕಾಸು ಸಾಮಾನ್ಯ ಮೂಲ ಅನುದಾನದಲ್ಲಿ ೬೪ ಲಕ್ಷ ರೂ.ಗಳಲ್ಲಿ ಪುರಸಭೆ ವ್ಯಾಪ್ತಿಯ ರಸ್ತೆ ಅಭಿವೃದ್ಧಿ, ಉದ್ಯಾನವನ ಅಭಿವೃದ್ಧಿಗೆ ಶಾಸಕ ರಂಜನ್ ಶಂಕುಸ್ಥಾಪನೆ ನೆರವೇರಿಸಿದರು. ಪಟ್ಟಣದ ಬಲಮುರಿ ಗಣಪತಿ ದೇವಾಲಯ ಬಳಿ ಶ್ರೀ ಶಿವಕುಮಾರ ಸ್ವಾಮೀಜಿಗಳ ಹೆಸರಿನಲ್ಲಿ ಉದ್ಯಾನವನ ಮತ್ತು ವೃತ್ತ ನಿರ್ಮಾಣಕ್ಕೆ ಶಾಸಕ ರಂಜನ್ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಸಾನಿಧ್ಯದಲ್ಲಿ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭ ಪುರಸಭೆ ಅಧ್ಯಕ್ಷ ಜಯವರ್ಧನ್, ಉಪಾಧ್ಯಕ್ಷೆ ಸುರಯ್ಯ ಭಾನು, ಪುರಸಭೆ ಮುಖ್ಯಾಧಿಕಾರಿ ಶಿವಪ್ಪ ನಾಯ್ಕ್, ಕುಡ ಅಧ್ಯಕ್ಷ ಎಂ.ಎA. ಚರಣ್, ಆರೋಗ್ಯಾಧಿಕಾರಿ ಉದಯ್ ಕುಮಾರ್ ಮತ್ತು ವಾರ್ಡ್ ಸದಸ್ಯರು ಗಳು, ಕುಶಾಲನಗರ ಯೋಜನಾ ಪ್ರಾಧಿಕಾರದ ನಿರ್ದೇಶಕರುಗಳು, ಬಿಜೆಪಿ ಪ್ರಮುಖರು ಇದ್ದರು.