ಮಡಿಕೇರಿ, ಜ. ೧೧: ಒಂಟಿ ಸಲಗವೊಂದು ಕೃಷಿಕರ ತೋಟಕ್ಕೆ ದಾಳಿಮಾಡಿ ಫಸಲು ನಾಶಗೊಳಿಸಿದ ಘಟನೆ ವೀರಾಜಪೇಟೆ ತಾಲೂಕಿನ ಮಗ್ಗುಲ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರೈತರಾದ ಪುಲಿಯಂಡ ಜಗದೀಶ್ ಹಾಗೂ ಕುಪ್ಪಚ್ಚಿರ ಸತೀಶ್ ತೋಟಕ್ಕೆ ಲಗ್ಗೆ ಇಟ್ಟ ಆನೆ ಕಾಫಿ, ತೆಂಗು, ಅಡಿಕೆ, ಬಾಳೆ ಗಿಡಗಳನ್ನು ನಾಶಪಡಿಸಿ ಲಕ್ಷಾಂತರ ರೂ. ನಷ್ಟಗೊಳಿಸಿದೆ. ವಿಷಯ ತಿಳಿದ ತಕ್ಷಣವೇ ಆನೆ ಕಾರ್ಯಪಡೆ ಎ.ಸಿ.ಎಫ್ ಚಂಗಪ್ಪ, ಉಪವಲಯ ಅರಣ್ಯಾಧಿಕಾರಿಗಳಾದ ಮೋನಿಷಾ, ಶ್ರೀಶೈಲ ಸೇರಿದಂತೆ ಆನೆ ಕಾರ್ಯಪಡೆ ತಂಡದ ಸಿಬ್ಬಂದಿಗಳು, ಆರ್.ಆರ್.ಟಿ. ತಂಡದ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ನಷ್ಟ ಪರಿಶೀಲನೆ ಮಾಡಿ ರೈತರಿಗೆ ಸೂಕ್ತ ಪರಿಹಾರ ಮತ್ತು ಬೆಳೆಗೆ ರಕ್ಷಣೆ ನೀಡುವ ಭರವಸೆ ನೀಡಿದರು.

ಆನೆ ಹಾವಳಿ ತಡೆಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಕೃಷಿಕ ಪುಲಿಯಂಡ ಜಗದೀಶ್ ಒತ್ತಾಯಿಸಿದ್ದಾರೆ.