ಗೋಣಿಕೊಪ್ಪಲು, ಜ. ೧೧: ಕಾಡಾನೆಗಳ ನಿರಂತರ ಹಾವಳಿ ಯಿಂದಾಗಿ ರೈತ ಕಂಗಾಲಾಗಿದ್ದು ದೊಡ್ಡ ಪ್ರಮಾಣದಲ್ಲಿ ಕಾಡಾನೆಗಳ ಉಪಟಳ ರೈತರನ್ನು ನಿರಂತರವಾಗಿ ಕಾಡುತ್ತಿದೆ. ವರ್ಷಪೂರ್ತಿ ತನ್ನ ಕಾಫಿ ತೋಟವನ್ನು ನಿರ್ವಹಣೆ ಮಾಡಿ ಇದೀಗ ಕಾಫಿ ಫಸಲನ್ನು ಕುಯ್ಯುವ ಸಂದರ್ಭದಲ್ಲಿ ಕಾಡಾನೆಗಳ ಹಿಂಡು ತೋಟದಲ್ಲಿ ಕಾಣಿಸಿಕೊಂಡು ಫಸಲು ಭರಿತ ಗಿಡಗಳನ್ನು ಹಾಳು ಮಾಡುವುದಲ್ಲದೆ ಕುಯ್ಲಿಗೆ ಬಂದಿದ್ದ ಕಾಫಿ ಹಣ್ಣುಗಳನ್ನು ಮನಸೋಇಚ್ಚೆ ತಿಂದು ಅಪಾರ ಪ್ರಮಾಣದಲ್ಲಿ ರೈತರಿಗೆ ನಷ್ಟ ಉಂಟುಮಾಡುತ್ತಿದೆ. ಇದರಿಂದ ರೈತನ ಸ್ಥಿತಿ ಹೈರಾಣವಾಗಿದೆ.
ತಿತಿಮತಿ ಸಮೀಪದ ತಾರಿಕಟ್ಟೆ ಗ್ರಾಮದ ರೈತ ವಿಜಯ್ ಕುಮಾರ್ ಎಂಬವರ ಮೂರು ಎಕರೆ ಪ್ರದೇಶದ ಅಡಿಕೆ ತೋಟಕ್ಕೆ ಲಗ್ಗೆ ಇಟ್ಟಿರುವ ಕಾಡಾನೆಗಳ ಹಿಂಡು ಬೆಳೆದು ನಿಂತ ಅಡಿಕೆ ಗಿಡ ಹಾಗೂ ಮರಗಳನ್ನು ಬುಡ ಸಹಿತ ಬೀಳಿಸಿ, ಇದರ ತೊಗಟೆಗಳನ್ನು ಸೀಳಿ ತಿನ್ನುತ್ತಿವೆ. ಇದರ ರುಚಿ ಕಂಡಿರುವ ಕಾಡಾನೆಗಳು ಬೆಳೆದು ನಿಂತಿರುವ ಅಡಿಕೆ ಗಿಡಗಳನ್ನು ಮನಬಂದAತೆ ಬೀಳಿಸಿದ ಪರಿಣಾಮ ಭಾರೀ ನಷ್ಟ ಸಂಭವಿಸಿದೆ.
ತೋಟದ ರಕ್ಷಣೆಗೆ ಅಳವಡಿಸಿರುವ ಸೋಲಾರ್ ಬೇಲಿಗಳನ್ನು ಧ್ವಂಸಗೊಳಿಸಿರುವ ಕಾಡಾನೆಗಳು ವಿಜಯ್ ಕುಮಾರ್ರವರಿಗೆ ಸೇರಿರುವ ಕಾಫಿ ತೋಟಕ್ಕೆ
(ಮೊದಲ ಪುಟದಿಂದ) ಅಳವಡಿಸಿರುವ ಒಂದೂವರೆ ಕಿ.ಮೀ. ವಿಸ್ತೀರ್ಣದ ಸೋಲಾರ್ ಬೇಲಿಗಳನ್ನು ಸಂಪೂರ್ಣ ಧ್ವಂಸಗೊಳಿಸಿದೆ. ಸುಮಾರು ರೂ. ೨ ಲಕ್ಷ ಮೌಲ್ಯದ ಸೋಲಾರ್ ಬೇಲಿಗಳು ನೆಲಕಚ್ಚಿವೆ. ಇದನ್ನು ದುರಸ್ತಿಗೊಳಿಸಲು ಸಾಧ್ಯವಾಗದ ರೀತಿಯಲ್ಲಿ ಕಾಡಾನೆಗಳು ಹಾಳು ಮಾಡಿವೆ.
ಇದರೊಂದಿಗೆ ಈ ವ್ಯಾಪ್ತಿಯ ಕಾಫಿ ತೋಟದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು ಕಾಫಿ ಹಣ್ಣುಗಳನ್ನು ತಿನ್ನುತ್ತ ಗಿಡಗಳನ್ನು ಹಾಳು ಗೆಡವಿವೆ. ಸಂಜೇಯ ವೇಳೆಯಲ್ಲಿ ಸಮೀಪದ ಅರಣ್ಯ ಪ್ರದೇಶದಿಂದ ರೈತರ ತೋಟಕ್ಕೆ ಲಗ್ಗೆ ಇಡುವ ಕಾಡಾನೆಗಳು ಮನಬಂದAತೆ ಲೂಟಿ ಮಾಡುತ್ತಿವೆ. ಮುಂಜಾನೆಯ ವೇಳೆ ಕೆಲವು ಗುಂಪಿನ ಆನೆಗಳು ಅರಣ್ಯ ಸೇರಿದರೆ ಉಳಿದ ಆನೆಗಳ ಗುಂಪುಗಳು ತೋಟದಲ್ಲಿಯೇ ನೆಲೆ ನಿಲ್ಲುತ್ತಿವೆ.
ತೋಟದಲ್ಲಿರುವ ವಿವಿಧ ಫಸಲುಗಳನ್ನು ಮನಬಂದAತೆ ತಿಂದು ಹಾಳು ಮಾಡುತ್ತಿರುವ ಕಾಡಾನೆಗಳು ಸಮೀಪದ ಕೆರೆಗೆ ತೆರಳಿ ನೀರು ಕುಡಿದು ಮತ್ತೆ ಅರಣ್ಯ ಪ್ರದೇಶವನ್ನು ಪ್ರವೇಶ ಮಾಡುತ್ತಿವೆ. ಈ ಭಾಗದಲ್ಲಿ ರೈತರ ತೋಟದಲ್ಲಿ ಕಾಡನೆಗಳ ಉಪಟಳ ಸಾಮಾನ್ಯವಾಗಿದೆ. ಆನೆಗಳನ್ನು ಓಡಿಸಲು ಅರಣ್ಯ ಇಲಾಖೆಯ ವತಿಯಿಂದ ಕೆಲ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಆದರೆ ಬೆರಳೆಣಿಕೆಯ ಸಿಬ್ಬಂದಿಗಳಿAದ ಕಾಡಾನೆಗಳನ್ನು ಹತೋಟಿಗೆ ತರಲು ಸಾಧ್ಯವಾಗುತ್ತಿಲ್ಲ.
ಕಾಫಿ ತೋಟದಲ್ಲಿ ಕಾಡಾನೆಗಳು ನೆಲೆನಿಂತ ಹಿನ್ನೆಲೆ ಕಾಫಿ ಕುಯ್ಯಲು ಕಾರ್ಮಿಕರು ತೋಟಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಕಾಡಾನೆಗಳ ಸಂಚಾರದಿAದಾಗಿ ಹಾಗೂ ಕಾಫಿ ಹಣ್ಣುಗಳನ್ನು ಆನೆಗಳು ತಿನ್ನಲು ಆರಂಭಿಸಿರುವುದರಿAದ ಭಾರೀ ಪ್ರಮಾಣದ ಕಾಫಿ ಹಣ್ಣುಗಳು ತೋಟದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಇದನ್ನು ಸಂಗ್ರಹಿಸಲು ಕಾರ್ಮಿಕರಿಗೆ ಸಾಧ್ಯವಾಗುತ್ತಿಲ್ಲ. ಅಷ್ಟು ದೊಡ್ಡ ಪ್ರಮಾಣದಲ್ಲಿ ರೈತರಿಗೆ ಈ ಭಾಗದಲ್ಲಿ ಕಾಡಾನೆಗಳ ಸಮಸ್ಯೆ ಎದುರಾಗಿದೆ. ಪ್ರತಿದಿನ ಈ ಭಾಗದ ರೈತರ ತೋಟಗಳಿಗೆ ಸರತಿ ಸಾಲಿನಂತೆ ಆಗಮಿಸುವ ಕಾಡಾನೆಗಳನ್ನು ನಿಯಂತ್ರಣಕ್ಕೆ ತರಲು ಇಲಾಖೆ ಸಿಬ್ಬಂದಿಗಳಿಗೆ ಸಾಧ್ಯವಾಗುತ್ತಿಲ್ಲ. ಪಟಾಕಿ ಸದ್ದುಗಳಿಗೆ ಕಾಡಾನೆಗಳು ಜಗ್ಗುತ್ತಿಲ್ಲ. ಹೀಗಾಗಿ ಈ ಭಾಗದ ಹಲವು ರೈತರ ಪರಿಸ್ಥಿತಿ ಶೋಚನೀಯವಾಗಿದೆ.
- ಹೆಚ್.ಕೆ. ಜಗದೀಶ್