ಮುಳ್ಳೂರು, ಜ. ೧೦: ಜಿಲ್ಲಾ ಪಂಚಾಯತ್ ಇಲಾಖೆ, ಜಿ.ಪಂ. ಸಂಜೀವಿನಿ ಯೋಜನೆ ಮತ್ತು ಶನಿವಾರಸಂತೆ ಗ್ರಾ.ಪಂ. ಸಂಯುಕ್ತ ಆಶ್ರಯದಲ್ಲಿ ಶನಿವಾರಸಂತೆ ಸಂತೆ ಮಾರುಕಟ್ಟೆಯಲ್ಲಿ ಶನಿವಾರ ಗ್ರಾ.ಪಂ. ಮಟ್ಟದ ಸಂಜೀವಿನಿ ಒಕ್ಕೂಟದ ಸಂತೆ ಮೇಳವನ್ನು ನಡೆಸಲಾಯಿತು.
ಸಂಜೀವಿನಿ ಸಂತೆ ಮೇಳವನ್ನು ಶನಿವಾರಸಂತೆ ಗ್ರಾ.ಪಂ. ಅಧ್ಯಕ್ಷೆ ಫರ್ಜಾನ್ ಶಾಹಿದ್ಖಾನ್ ಉದ್ಘಾಟಿಸಿದ ಬಳಿಕ ಮಾತನಾಡಿ, ಸಂಜೀವಿನಿ ಒಕ್ಕೂಟದ ಸದಸ್ಯೆಯರು ಸಂತೆ ಮೇಳವನ್ನು ಹಮ್ಮಿಕೊಳ್ಳುವು ದರಿಂದ ಮಹಿಳೆಯರಲ್ಲಿ ವ್ಯಾವಹಾರಿಕಾ ಅರಿವಿನ ಜೊತೆಯಲ್ಲಿ ಆರ್ಥಿಕವಾಗಿ ಸ್ವಾವಲಂಬಿಯಾಗಿ ಜೀವನ ನಡೆಸುವ ಬಗ್ಗೆ ತಿಳಿದು ಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಂಜೀವಿನಿ ಸ್ವಸಹಾಯ ಸಂಘದ ಮಹಿಳೆಯರು ಯೋಜನೆ ಯನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಸಂಜೀವಿನಿ ಯೋಜನೆಯ ಜಿಲ್ಲಾ ವ್ಯವಸ್ಥಾಪಕ ಪಿ.ಎಸ್. ಜಗನ್ನಾಥ್ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿ, ಸಂಜೀವಿನಿ ಸ್ವಸಹಾಯ ಸಂಘದ ಸದಸ್ಯೆಯರು ತಮ್ಮ ಮನೆಗಳಲ್ಲಿ ಬೆಳೆದ ತರಕಾರಿ, ಕಾಯಿಪಲ್ಲೆ ಹಣ್ಣು ಹಂಪಲು ಸೇರಿದಂತೆ ಆಹಾರ ಪದಾರ್ಥಗಳು, ಮನೆಯಲ್ಲಿ ತಯಾರಿಸಿದ ಅಲಂಕಾರಿಕಾ ಸಾಮಗ್ರಿಗಳು, ಸಿದ್ದ ಉಡುಪು ಇತರೆ ಎಲ್ಲಾ ರೀತಿಯ ಉತ್ಪನ್ನಗಳಿಗೆ ಮಾರುಕಟ್ಟೆಯ ವ್ಯವಸ್ಥೆ ಮಾಡಿಕೊಡುವ ಉದ್ದೇಶದಿಂದ ಜಿ.ಪಂ. ಇಲಾಖೆ ಮತ್ತು ಜಿಲ್ಲಾ ಸಂಜೀವಿನಿ ಯೋಜನೆ ಮೂಲಕ ಪ್ರತಿ ಗ್ರಾ.ಪಂ. ತಾಲೂಕು ಮಟ್ಟದಲ್ಲಿ ಸಂಜೀವಿನಿ ಒಕ್ಕೂಟದ ಸಂತೆ ಮೇಳವನ್ನು ನಡೆಸಲು ಅವಕಾಶ ಮಾಡಿಕೊಡುತ್ತಿದೆ ಎಂದರು. ಸಂಜೀವಿನಿ ಸಂತೆ ಮೇಳದಲ್ಲಿ ಒಕ್ಕೂಟದ ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಬೇಡಿಕೆ ಇದ್ದು ಈ ನಿಟ್ಟಿನಲ್ಲಿ ಮಹಿಳೆಯರು ಆರ್ಥಿಕವಾಗಿ ಸಫಲತೆಯನ್ನು ಕಾಣಬಹುದು ಎಂದರು.
ಸAಜೀವಿನಿ ಯೋಜನೆಯ ಸೋಮವಾರಪೇಟೆ ವಲಯ ಮೇಲ್ವಿಚಾರಕಿ ಬಿ.ಆರ್. ಭವ್ಯ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಜೀವಿನಿ ತಾಲೂಕು ಒಕ್ಕೂಟದ ಅಧ್ಯಕ್ಷೆ ಜಾನಕಿ, ಶನಿವಾರಸಂತೆ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಎಂ.ಕೆ. ಚಂದ್ರಕಲಾ, ಆರ್ಎಸ್ಇಟಿಐ ಸಂಸ್ಥೆಯ ಸಿ.ಇ. ಹರೀಶ್, ಶನಿವಾರಸಂತೆ ಗ್ರಾ.ಪಂ. ಕಾರ್ಯದರ್ಶಿ ದೇವರಾಜ್, ಸಂಜೀವಿನಿ ಸಂಸ್ಥೆಯ ಸಿಬ್ಬಂದಿ ಹಾಜರಿದ್ದರು.