ಮಡಿಕೇರಿ, ಜ. ೧೧: ಮಡಿಕೇರಿ ತಾಲೂಕು ಕತ್ತಲೆಕಾಡು ಗ್ರಾಮದ ಮನೆ ಒಂದರಲ್ಲಿ ಸಿಲಿಂಡರ್ ಸ್ಫೋಟಗೊಂಡಿದ್ದು, ಮನೆಯಲ್ಲಿದ್ದ ವಸ್ತುಗಳೆಲ್ಲ ಸಂಪೂರ್ಣ ನಾಶವಾಗಿವೆ. ಸ್ಫೋಟ ಸಂದರ್ಭ ಮನೆಯಲ್ಲಿ ಯಾರೂ ಇಲ್ಲದಿದ್ದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಗ್ರಾಮದ ಶಿವಕುಮಾರ್ ಅವರ ಮನೆಯಲ್ಲಿದ್ದ ಸಿಲಿಂಡರ್ ಇಂದು ಮಧ್ಯಾಹ್ನ ಸುಮಾರು ೩:೩೦ಕ್ಕೆ ಸ್ಫೋಟಗೊಂಡಿದೆ.
ಶಿವಕುಮಾರ್ ಹಾಗೂ ಅವರ ಪತ್ನಿ ನೇತ್ರ ಕಾರ್ಮಿಕರಾಗಿದ್ದು ಸ್ಫೋಟ ಸಂದರ್ಭ ಕೆಲಸಕ್ಕೆ ತೆರಳಿದ್ದರು. ಅವರ ಇಬ್ಬರು ಮಕ್ಕಳು ಶಾಲೆಗೆ ತೆರಳಿದ್ದರು. ಎದುರುಗಡೆ ಮನೆಯಲ್ಲಿ ಶಿವಕುಮಾರ್ ಅವರ ತಂದೆ -ತಾಯಿ ವಾಸವಿದ್ದು, ಸಿಲಿಂಡರ್ ಸ್ಫೋಟಗೊಂಡ ಬಳಿಕ ತಾಯಿ ಹೊರಬಂದು ಗಮನಿಸಿ ಸ್ಥಳೀಯರಿಗೆ ತಿಳಿಸಿದ್ದಾರೆ. ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸಲಾಯಿ ತಾದರೂ ಮನೆಯಲ್ಲಿದ್ದ ಆಹಾರ ಸಾಮಗ್ರಿ ಹಾಗೂ ಇತರ ಬೆಲೆ ಬಾಳುವ ವಸ್ತುಗಳು ಸಂಪೂರ್ಣ ಭಸ್ಮವಾಗಿವೆ. ಬಳಿಕ ಅಗ್ನಿಶಾಮಕದಳದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಕಡಗದಾಳು ಪಂಚಾಯಿತಿ ಸದಸ್ಯರುಗಳಾದ ಭಾರತಿ, ಆನಂದ, ಶಂಬಯ್ಯಾ, ಗೀತಾ, ಪುಷ್ಪಾವತಿ ಸೇರಿದಂತೆ ಅಭಿವೃದ್ಧಿ ಅಧಿಕಾರಿ ದೇವಿಕಾ ಹಾಜರಿದ್ದರು.