ಕುಶಾಲನಗರ, ಜ. ೧೦: ಕೊಡವ ಸಂಸ್ಕೃತಿ, ಆಚಾರ, ವಿಚಾರ, ಪದ್ಧತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸ ಆಗಬೇಕಾಗಿದೆ ಎಂದು ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ರವಿ ಕಾಳಪ್ಪ ಕರೆ ನೀಡಿದರು. ಕುಶಾಲನಗರ ಕೊಡವ ಸಮಾಜದ ಆಶ್ರಯದಲ್ಲಿ ಪುತ್ತರಿ ಉರೊರ್ಮೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯುವಪೀಳಿಗೆ ಆಧುನಿಕತೆಯತ್ತ ಮಾರುಹೋಗಿ ಕೊಡವ ಮೂಲ ಸಂಸ್ಕೃತಿಯನ್ನು ಮರೆಯುವ ಪರಿಸ್ಥಿತಿ ಎದುರಾಗುತ್ತಿದೆ. ಯುವಜನಾಂಗಕ್ಕೆ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸಿ ಮಾರ್ಗದರ್ಶನ ನೀಡುವಂತಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಉದ್ಯಮಿ ಜೆಮ್ಸಿ ಪೊನ್ನಪ್ಪ ಮಾತನಾಡಿ, ಕುಶಾಲನಗರ ಕೊಡವ ಸಮಾಜದಲ್ಲಿ ಸದಸ್ಯರ ಸಂಖ್ಯೆ ಏರಿಕೆಯಾಗಿದ್ದು, ಸಮುದಾಯದ ಕಾರ್ಯಕ್ರಮಗಳಿಗೆ ಪ್ರತ್ಯೇಕ ಕಟ್ಟಡದ ಅವಶ್ಯಕತೆ ಇದೆ ಈ ಹಿನ್ನಲೆಯಲ್ಲಿ ವಿಶಾಲವಾದ ಜಾಗ ಖರೀದಿಸಿ ಬೃಹತ್ ಕಟ್ಟಡ ನಿರ್ಮಾಣ ಮಾಡಬೇಕೆಂದು ಸಲಹೆ ನೀಡಿದರು. ಕೊಡವ ಸಮಾಜದ ಅಧ್ಯಕ್ಷ ಮಂಡೆಪAಡ ಬೋಸ್ ಮೊಣ್ಣಪ್ಪ ಮಾತನಾಡಿ, ಕೊಡವ ಸಮಾಜದ ಮೂಲಕ ನಿರಂತರವಾಗಿ ಹಬ್ಬ ಹರಿದಿನಗಳನ್ನು ಆಚರಿಸಲಾಗುತ್ತಿದೆ. ಸಮುದಾಯದ ಏಳಿಗೆಗಾಗಿ ಕಾರ್ಯಕ್ರಮಗಳ ಮೂಲಕ ನಿರಂತರ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
ಊರೊರ್ಮೆ ಕಾರ್ಯಕ್ರಮ ಅಂಗವಾಗಿ ಕೊಡವ ಸಮಾಜದಲ್ಲಿ ಕೋಲಾಟ, ಪರೆಯಕಳಿ, ಉಮ್ಮತಾಟ್, ಮಕ್ಕಳ ನೃತ್ಯ ಮತ್ತಿತರ ಕಾರ್ಯಕ್ರಮಗಳು ನಡೆದವು. ಸಮಾಜದ ಉಪಾಧ್ಯಕ್ಷ ಪುಲಿಯಂಡ ಚಂಗಪ್ಪ, ಕಾರ್ಯದರ್ಶಿ ವಾಂಚೀರ ನಂಜುAಡ, ಖಜಾಂಚಿ ಬಲ್ಯಾಟಂಡ ಚಿಂಗಪ್ಪ, ಜಂಟಿ ಕಾರ್ಯದರ್ಶಿ ಕೇಕಡ ಸೋಮಣ್ಣ ಮತ್ತಿತರರು ಇದ್ದರು.