ಕುಶಾಲನಗರ, ಜ. ೯: ಅಂಗಡಿಯೊAದಕ್ಕೆ ಇಬ್ಬರು ಯುವಕರು ದ್ವಿಚಕ್ರ ವಾಹನದಲ್ಲಿ ಬಂದು ಸಣ್ಣ ಪುಟ್ಟ ದಿನಬಳಕೆ ಸಾಮಗ್ರಿಗಳನ್ನು ಖರೀದಿಸಿ ಹಣ ನೀಡದೆ ಪರಾರಿಯಾದ ಘಟನೆ ಕುಶಾಲನಗರ ಸಮೀಪದ ಗುಡ್ಡೆಹೊಸೂರು ಬಳಿಯ ಅತ್ತೂರು ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ. ಸ್ಥಳೀಯರು ಬೆನ್ನಟ್ಟಿ ಸಾಮಗ್ರಿಗಳನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಯುವಕರು ಪರಾರಿಯಾಗಿದ್ದಾರೆ.

ಗುಡ್ಡೆಹೊಸೂರು -ಹಾರಂಗಿ ರಸ್ತೆಯ ಅತ್ತೂರು ಸರ್ಕಾರಿ ಶಾಲೆ ಬಳಿ ಇಬ್ಬರು ಅಪರಿಚಿತ ಯುವಕರು ದ್ವಿಚಕ್ರ ವಾಹನವೊಂದರಲ್ಲಿ (ಕೆಎ ೪೫ ಇ-ಸಿ ೫೨೨೬) ಅಂಗಡಿಗೆ ಬಂದು ಸಿಗರೇಟ್, ಜ್ಯೂಸ್, ಬಿಸ್ಕೇಟ್ ಮತ್ತಿತರ ವಸ್ತುಗಳನ್ನು ಖರೀದಿಸಿ ಬಿಲ್ ರೂ. ೨೦೦ ಹಣವನ್ನು ಅಂಗಡಿ ಮಾಲೀಕರಿಗೆ ನೀಡದೆ ಪರಾರಿಯಾಗಿದ್ದಾಗಿ ಅಂಗಡಿ ಮಾಲೀಕರಾದ ವಸಂತಿ ಎಂಬವರು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಮಹಿಳೆ ಅಲ್ಲಿಗೆ ಬಂದ ಪರಿಚಿತ ವ್ಯಕ್ತಿಗಳ ಸಹಾಯ ಕೋರಿದಾಗ ಅವರುಗಳು ಗುಡ್ಡೆಹೊಸೂರು ಬಳಿ ತೆರಳುತ್ತಿದ್ದ ಯುವಕರನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ಯುವಕರು ಬೈಕ್ ಬಿಟ್ಟು ಪರಾರಿಯಾಗಿದ್ದಾರೆ. ಅಲ್ಲಿದ್ದ ವಸ್ತುಗಳನ್ನು ವಶಕ್ಕೆ ಪಡೆದು ಅಂಗಡಿ ಮಾಲೀಕರಿಗೆ ಹಿಂತಿರುಗಿಸಿದ್ದಾರೆ.

ಘಟನೆ ಬಗ್ಗೆ ಅಂಗಡಿ ಮಾಲೀಕರು ಕುಶಾಲನಗರ ಗ್ರಾಮಾಂತರ ಠಾಣೆಯ ಬೀಟ್ ಪೊಲೀಸರಿಗೆ ತಿಳಿಸಿದ್ದು, ಪರಾರಿಯಾದ ಇಬ್ಬರು ಯುವಕರ ಪತ್ತೆಗೆ ಸ್ಥಳೀಯರು ಆಗ್ರಹಿಸಿದ್ದಾರೆ. ಈ ಯುವಕರು ಕಳೆದ ಕೆಲವು ದಿನಗಳಿಂದ ಗುಡ್ಡೆಹೊಸೂರು- ಹಾರಂಗಿ ರಸ್ತೆಯಲ್ಲಿ ಸಂಶಯಾಸ್ಪದವಾಗಿ ಓಡಾಡುತ್ತಿರುವ ಬಗ್ಗೆ ಸ್ಥಳೀಯರು ಸುಳಿವು ನೀಡಿದ್ದಾರೆ. ಇತ್ತೀಚೆಗೆ ನಡೆದ ಅತ್ತೂರು ದೇವಾಲಯ ಕಳ್ಳತನ ಪ್ರಕರಣದಲ್ಲಿ ಈ ತಂಡ ಶಾಮಿಲಾಗಿರುವ ಸಾಧ್ಯತೆ ಇರುವುದಾಗಿ ಸಂಶಯ ಕೂಡ ವ್ಯಕ್ತಪಡಿಸಿದ್ದಾರೆ. -ಸಿಂಚು