ಗೋಣಿಕೊಪ್ಪಲು, ಜ. ೧೦: ಹೊಸ ವರ್ಷ ಪ್ರಾರಂಭ ವಾಗುತ್ತಿದ್ದಂತೆಯೇ ದ.ಕೊಡಗಿನಲ್ಲಿ ಹುಲಿಯ ಹೆಜ್ಜೆ ಗುರುತುಗಳು ಮತ್ತೆ ಕಾಣಲಾರಂಭಿಸಿದ್ದು, ಸೋಮವಾರ ತಡರಾತ್ರಿಯ ವೇಳೆ ಬಲ್ಯಮುಂಡೂರು ಸಮೀಪದ ರೈತರ ಕೊಟ್ಟಿಗೆಗೆ ತೆರಳಿದ ಹುಲಿಯು ಕೊಟ್ಟಿಗೆಯಲ್ಲಿದ್ದ ಎಮ್ಮೆಯನ್ನು ಕೊಂದು ಹಾಕಿದೆ. ಗ್ರಾಮದ ರೈತರಾದ ಸುಮ ಸುಬ್ಬಯ್ಯ ಎಂಬವರಿಗೆ ಸೇರಿದ ಎಮ್ಮೆಯನ್ನು ಕೊಂದ ಹುಲಿಯು ನಂತರ ಅದನ್ನು ಸಮೀಪದ ಭತ್ತದ ಗದ್ದೆಯ ಬಳಿಗೆ ಎಳೆದೊಯ್ದು ಮಾಂಸವನ್ನು ತಿಂದು ಕಾಲ್ಕಿತ್ತಿದೆ.
ಮುಂಜಾನೆ ವೇಳೆ ಕೊಟ್ಟಿಗೆಗೆ ತೆರಳಿದಾಗ ಎಮ್ಮೆಯು ಕೊಟ್ಟಿಗೆಯಲ್ಲಿ ಇರಲಿಲ್ಲ. ಹುಲಿಯ ಹೆಜ್ಜೆ ಗುರುತುಗಳು ಕೊಟ್ಟಿಗೆ ಹಾಗೂ ಸುತ್ತಮುತ್ತ ಕಂಡ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಸಮೀಪದ ಭತ್ತದ ಗದ್ದೆಯಲ್ಲಿ ಎಮ್ಮೆಯ ಕಳೇಬರ ಪತ್ತೆಯಾಗಿದೆ. ವಿಷಯ ತಿಳಿದ ಮನೆಯವರು ಪೊನ್ನಂಪೇಟೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಒದಗಿಸಿದ್ದಾರೆ.
ಸುದ್ದಿ ತಿಳಿದ ಪೊನ್ನಂಪೇಟೆ ಆರ್ಎಫ್ಓ ಶಂಕರ್, ದಿವಾಕರ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಹುಲಿಯ ಸೆರೆಗೆ ಬೋನನ್ನು ಅಳವಡಿಸಿದ್ದು ಹುಲಿಯ ಚಲನವಲನದ ಬಗ್ಗೆ ಮಾಹಿತಿ ಪಡೆಯಲು ಕ್ಯಾಮೆರಾ ಅಳವಡಿಸಲಾಗಿದೆ. ಮುಂಜಾಗೃತ ಕ್ರಮವಾಗಿ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳದಲ್ಲಿ ಮೊಖಂ ಹೂಡಿದ್ದಾರೆ. ದ.ಕೊಡಗಿನಲ್ಲಿ ಹುಲಿಯ ಸಂಚಾರ ಹೆಚ್ಚಾಗುತ್ತಿದ್ದಂತೆಯೇ ಈ ಭಾಗದ ರೈತರಿಗೆ ಹಾಗೂ ಸಾರ್ವಜನಿಕರಿಗೆ ಭಯದ ವಾತಾವರಣ ನಿರ್ಮಾಣವಾಗಿದೆ.