ಮುಳ್ಳೂರು, ಜ. ೧೦: ¸ಮೀಪದ ಶನಿವಾರಸಂತೆ ಶ್ರೀ ವಿಘ್ನೇಶ್ವರ ಗೋಲ್ಡನ್ ಸ್ಕೂಲ್ ವತಿಯಿಂದ ಶಾಲಾ ಆವರಣದಲ್ಲಿ ಮಕ್ಕಳ ಸಂತೆಯನ್ನು ಆಯೋಜಿಸಲಾಗಿತ್ತು. ಶಾಲಾ ಪುಟಾಣಿಗಳು ಆಸಕ್ತಿ ಮತ್ತು ಸಂತಸದಿAದ ಮಕ್ಕಳ ಸಂತೆಯಲ್ಲಿ ಭಾಗವಹಿಸಿದರು. ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಬೆಳೆದ ತರಕಾರಿ, ಸೊಪ್ಪು ಮುಂತಾದ ಕಾಯಿಪಲ್ಲೆ, ಬಾಳೆಹಣ್ಣು, ಕಿತ್ತಳೆ, ಹಣ್ಣು ಹಂಪಲುಗಳು ಸೇರಿದಂತೆ ತಮ್ಮ ಮನೆಯಲ್ಲಿ ಪೋಷಕರು ತಯಾರಿಸಿಕೊಟ್ಟ ತಿಂಡಿ ತಿನಿಸುಗಳನ್ನು ತಂದು ಮಕ್ಕಳ ಸಂತೆಯಲ್ಲಿ ವ್ಯಾಪಾರ ಮಾಡಿದರು. ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ವ್ಯಾಪಾರ ವ್ಯವಹಾರದ ಬಗ್ಗೆ ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ವಿಘ್ನೇಶ್ವರ ಬಾಲಕಿಯರ ವಿದ್ಯಾಸಂಸ್ಥೆಯ ಪ್ರೌಢಶಾಲಾ ಮತ್ತು ಪದವಿ ಪೂರ್ವ ವಿಭಾಗದ ವಿದ್ಯಾರ್ಥಿನಿಯರು ಪುಟಾಣಿಗಳಿಗೆ ಸಾಥ್ ನೀಡಿದರು. ಮಕ್ಕಳ ಸಂತೆಯಲ್ಲಿ ವಿದ್ಯಾರ್ಥಿಗಳ ಪೋಷಕರು ಮತ್ತು ಸಾರ್ವಜನಿಕರು ತಮ್ಮ ಮಕ್ಕಳ ವ್ಯಾಪಾರ ವ್ಯವಹಾರ ಮತ್ತು ಚುರುಕುತನ ನೋಡಿ ಬೆರಗಾದರು.

ವಿಘ್ನೇಶ್ವರ ಗೋಲ್ಡನ್ ಸ್ಕೂಲ್ ಮುಖ್ಯ ಶಿಕ್ಷಕ ಷಣ್ಮುಖಯ್ಯ ಮಕ್ಕಳ ಸಂತೆ ಕುರಿತು ಮಾತನಾಡಿ-ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಜೊತೆಯಲ್ಲಿ ಇತರೆ ವ್ಯಾವಹಾರಿಕ ಜ್ಞಾನ ಹೊಂದುವ ಅಗತ್ಯ ಇರುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ವ್ಯಾಪಾರ ವ್ಯವಹಾರ, ಆರ್ಥಿಕ ವಹಿವಾಟು ಹಾಗೂ ಉಳಿತಾಯದ ಬಗ್ಗೆ ಜ್ಞಾನ ಮೂಡಿಸುವ ಉದ್ದೇಶದಿಂದ ನಮ್ಮ ಶಾಲೆಯ ವಿದ್ಯಾರ್ಥಿಗಳಿಗಾಗಿ ಮಕ್ಕಳ ಸಂತೆಯನ್ನು ಆಯೋಜನೆ ಮಾಡಲಾಗಿದೆ ಎಂದರು.

ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಟಿ.ಪಿ. ಶಿವಪ್ರಕಾಶ್, ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕ ಕೆ.ಪಿ. ಜಯಕುಮಾರ್ ಮಾತನಾಡಿದರು.

ಈ ಸಂದರ್ಭ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಬೆಳ್ಳಿಯಪ್ಪ, ನಿರ್ದೇಶಕಿ ನಿತ್ಯನಿಧಿ, ವಿದ್ಯಾಸಂಸ್ಥೆ ಶಿಕ್ಷಕರು, ಉಪನ್ಯಾಸಕರು, ವಿದ್ಯಾಸಂಸ್ಥೆ ಸಿಬ್ಬಂದಿ ಉಪಸ್ಥಿತರಿದ್ದರು.