ಮಡಿಕೇರಿ, ಜ. ೯: ಕೊಡಗು ಜಿಲ್ಲಾ ಬಂಟರ ಸಂಘದ ಅಧ್ಯಕ್ಷರನ್ನು ಕೆಲವೇ ಮಂದಿ ಸೇರಿಕೊಂಡು ನಿಯಮ ಬಾಹಿರವಾಗಿ ನೇಮಕ ಮಾಡಿ ಕೊಂಡಿದ್ದು, ಇದು ಅಸಿಂಧುವಾಗಲಿದೆ. ಸಂಘದ ನೂತನ ಅಧ್ಯಕ್ಷರನ್ನು ಶೀಘ್ರದಲ್ಲಿಯೇ ನೇಮಕ ಮಾಡಲಾಗುವದೆಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಉಪಾಧ್ಯಕ್ಷ ರವೀಂದ್ರ ರೈ; ಸಂಘದ ಅಧ್ಯಕ್ಷರಾಗಿರುವ ಬಿ.ಡಿ. ನಾರಾಯಣ ರೈ ಅವರು ಸಂಘದ ಕಾರ್ಯದರ್ಶಿಯಾಗಿರುವ ರತ್ನಾಕರ ಶೆಟ್ಟಿ ಅವರನ್ನು ನಿನ್ನೆ ಅಧ್ಯಕ್ಷರನ್ನಾಗಿ ಘೋಷಣೆ ಮಾಡಿದ್ದಾರೆ. ಈ ಆಯ್ಕೆ ಅಸಿಂಧುವಾಗಲಿದೆ. ಸಾವಿರಾರು ಮಂದಿ ಸದಸ್ಯರಿರುವ ಸಂಘದ ಬೈಲಾ ಪ್ರಕಾರ ಮಹಾಸಭೆ ನಡೆಸಿ ಚುನಾವಣೆ ಮೂಲಕ ಅಥವಾ ಸರ್ವರ ಸಮ್ಮತಿಯೊಂದಿಗೆ ಅಧ್ಯಕ್ಷರ ಆಯ್ಕೆ ಆಗಬೇಕಾಗುತ್ತದೆ. ಆದರೆ, ಇಲ್ಲಿ ನಿಯಮಗಳನ್ನು ಉಲ್ಲಂಘನೆ ಮಾಡಿ ಯಾರ ಗಮನಕ್ಕೂ ತಾರದೆ ಆಯ್ಕೆ ಮಾಡಿರುವದು ಖಂಡನೀಯವೆAದು ಹೇಳಿದರು.

ಅಧ್ಯಕ್ಷರ ಸೇವಾವಧಿ ಮೂರು ವರ್ಷಗಳು ಮಾತ್ರವಿದ್ದು, ನಾರಾಯಣ ರೈ ಅವರು ೮ವರ್ಷಗಳಿಂದ ಅಧ್ಯಕ್ಷರಾಗಿ ಮುಂದುವರಿಯುತ್ತಿದ್ದಾರೆ. ಆದರೆ, ಇದುವರೆಗೂ ಯಾವದೇ ಚಟುವಟಿಕೆಗಳನ್ನು ಮಾಡಿರುವದಿಲ್ಲ. ಮಹಾಸಭೆಗಳನ್ನು ಕೂಡ ಕರೆದಿಲ್ಲ, ವಿಕೋಪ, ಕೊರೊನಾ ಸಂದರ್ಭಗಳಲ್ಲಿಯೂ ಯಾರಿಗೂ ನೆರವಾಗುವ ಕಾರ್ಯವನ್ನು ಕೂಡ ಮಾಡಿಲ್ಲ. ಸಂಘ ನಿಷ್ಕಿçÃಯವಾಗಿತ್ತು. ಈ ಬಗ್ಗೆ ಕಾರ್ಯದರ್ಶಿಯಾಗಿರುವ ರತ್ನಾಕರ ಶೆಟ್ಟಿ ಅವರ ಗಮನಕ್ಕೆ ತಂದು ಮಹಾಸಭೆ ನಡೆಸಿ ನೂತನ ಅಧ್ಯಕ್ಷರ ಆಯ್ಕೆ ಮಾಡುವಂತೆ ಕೋರಲಾಗಿದ್ದರೂ ಯಾವದೇ ಪೂರ್ವಬಾವಿ ಸಭೆ, ಮಹಾಸಭೆ ನಡೆಸಿರುವದಿಲ್ಲ. ಅಧ್ಯಕ್ಷರ ಗಮನಕ್ಕೆ ತಂದು ಡಿ. ೩೧ರ ಗಡುವು ನೀಡಿದ್ದರೂ ಯಾವದೇ ಕ್ರಮ ಕೈಗೊಂಡಿರುವದಿಲ್ಲ. ಬದಲಿಗೆ ರತ್ನಾಕರ ಶೆಟ್ಟಿಯವರಿಗೆ ಪ್ರಶಸ್ತಿ ಬಂದಿದೆ ಎಂಬ ನೆಪದಲ್ಲಿ ೧೦ ರಿಂದ ೧೫ ಮಂದಿಯನ್ನು ವೀರಾಜಪೇಟೆಯ ರೆಸಾರ್ಟ್ಗೆ ಪಾರ್ಟಿ ಕೊಡುವದಾಗಿ ಕರೆಸಿಕೊಂಡು ಅಲ್ಲಿ ರತ್ನಾಕರ ಶೆಟ್ಟಿ ಅವರನ್ನು ಏಕಾಏಕಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಓರ್ವ ನಿಷ್ಕಿçÃಯ ಅಧ್ಯಕ್ಷ ನಿಷ್ಕಿçÃಯ ಕಾರ್ಯದರ್ಶಿಯನ್ನು ಅಧ್ಯಕ್ಷನ್ನಾಗಿ ನೇಮಕ ಮಾಡಿರುವದು ಹಾಸ್ಯಾಸ್ಪದವಾಗಿದ್ದು, ಸದ್ಯದಲ್ಲಿಯೇ ಹಂಗಾಮಿ ಅಧ್ಯಕ್ಷರನ್ನು ನೇಮಕ ಮಾಡಿ ಕಾರ್ಯಕಾರಿ ಸಮಿತಿ ಸಭೆ ಕರೆದು ಮಹಾಸಭೆ ಏರ್ಪಡಿಸಿ ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗುವದೆಂದು ತಿಳಿಸಿದರು.

ಮತ್ತೊರ್ವ ಉಪಾಧ್ಯಕ್ಷ ಬಿ.ಕೆ ರವೀಂದ್ರ ರೈ ಮಾತನಾಡಿ; ಅಧ್ಯಕ್ಷರನ್ನಾಗಿ ನೇಮಕ ಮಾಡಿ ಅಧಿಕಾರ ಹಸ್ತಾಂತರ ಮಾಡಲು ಅಧ್ಯಕ್ಷ ಹಾಗೂ ಕಾರ್ಯದರ್ಶಿ ಬಳಿ ಯಾವದೇ ದಾಖಲೆಗಳಿಲ್ಲ, ಎಲ್ಲವೂ ಸಹ ಕಾರ್ಯದರ್ಶಿ, ಕೋಶಾಧಿಕಾರಿಗಳ ಬಳಿ ಇದೆ. ಅದೂ ಅಲ್ಲದೆ ನಿನ್ನೆಯ ಸಭೆಗೆ ಸಂಘದ ಯಾವದೇ ಪದಾಧಿಕಾರಿಗಳಿಗೆ ಆಹ್ವಾನವಿರಲಿಲ್ಲ. ಕೆಲವೇ ಕೆಲವು ಸ್ವಜಾತಿ ಬಂಧುಗಳನ್ನು ಕರೆಸಿಕೊಂಡು ಪಾರ್ಟಿ ಮಾಡಿ ಹೊಸ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಗೌರವ ಅಧ್ಯಕ್ಷ ಬಿ.ಬಿ. ಐತಪ್ಪ ರೈ, ಕೋಶಾಧಿಕಾರಿ ರತ್ನಾಕರ ರೈ, ಮಡಿಕೇರಿ ತಾಲೂಕು ಅಧ್ಯಕ್ಷ ರಮೇಶ್ ರೈ, ಯುವ ಘಟಕದ ಅಧ್ಯಕ್ಷ ಶರತ್ ಶೆಟ್ಟಿ, ಪ್ರಭು ರೈ ಇದ್ದರು.