ಮಡಿಕೇರಿ, ಜ. ೧೦: ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಮೂಲಕ ಕೊಡಗು ಜಿಲ್ಲೆಯಲ್ಲಿ ಎರಡು ಪ್ರದೇಶಗಳಲ್ಲಿ ಔಷಧೀಯ ಸಸ್ಯಗಳ ಉದ್ಯಾನವನ ನಿರ್ಮಾಣಕ್ಕೆ ಅನುಮೋದನೆಯನ್ನು ಪಡೆದುಕೊಳ್ಳ ಲಾಗಿದೆ. ಜೀವವೈವಿಧ್ಯ ಮಂಡಳಿಯ ಅಧ್ಯಕ್ಷರಾಗಿರುವ ಕೊಡಗಿನವರೇ ಆದ ನಾಪಂಡ ರವಿ ಕಾಳಪ್ಪ ಅವರು ಈ ಬಗ್ಗೆ ಆಸಕ್ತಿ ವಹಿಸಿದ್ದು, ಮಂಡಳಿಯ ಸಭೆಯಲ್ಲಿ ಇದಕ್ಕೆ ಅನುಮೋದನೆ ಯನ್ನು ಪಡೆಯಲಾಗಿದೆ.

ಬೆಂಗಳೂರಿನ ಮಲ್ಲೇಶ್ವರಂನಲ್ಲಿ ರುವ ಮಂಡಳಿ ಕಚೇರಿ ವನವಿಕಾಸ ಸಭಾಂಗಣದಲ್ಲಿ ಜರುಗಿದ ಮಂಡಳಿಯ ತ್ರೆöÊಮಾಸಿಕ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ದೊರೆತಿದೆ. ರವಿ ಕಾಳಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿತ್ತು.

ಈ ಯೋಜನೆಯ ಕುರಿತಾಗಿ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ರವಿ ಕಾಳಪ್ಪ ಅವರು ಸದ್ಯದಮಟ್ಟಿಗೆ ಕೊಡಗಿನ ಎರಡು ಕಡೆಗಳಲ್ಲಿ ಈ ಯೋಜನೆ ಪ್ರಾರಂಭಿಸುವ ಚಿಂತನೆ ಮಾಡಲಾಗಿದೆ. ಇದಕ್ಕೆ ಜಾಗ ಕಲ್ಪಿಸುವ ಬಗ್ಗೆ ಅರಣ್ಯ ಇಲಾಖೆ ಮೂಲಕ ಸಮ್ಮತಿ ದೊರೆತಿದ್ದು, ಮಂಡಳಿಯ ಮೂಲಕ ಅನುಮೋದನೆ ಪಡೆದುಕೊಂಡಿರುವುದಾಗಿ ತಿಳಿಸಿದರು.

ಜಿಲ್ಲೆಯಲ್ಲಿ ಇದೀಗ ನೂತನವಾಗಿ ಹಾರಂಗಿಯಲ್ಲಿ ಪ್ರಾರಂಭಿಸಲಾಗಿರುವ ಹಾರಂಗಿ ಬಳಿಯ ಆನೆ ಕ್ಯಾಂಪ್‌ನ ಬಳಿ ಹಾಗೂ ಮಡಿಕೇರಿಯ ಅರಣ್ಯ ಭವನದ ಬಳಿಯಲ್ಲಿ ಜಾಗ ನೀಡುವ ಬಗ್ಗೆ ಆಶ್ವಾಸನೆ ದೊರೆತಿದೆ. ಮುಂದೆ ಇದರ ಬಗ್ಗೆ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆಯೊಂದಿಗೆ ವ್ಯವಹರಿಸಬೇಕಿದೆ. ಅಲ್ಲದೆ ಸೂಕ್ತ ಕ್ರಿಯಾಯೋಜನೆಯನ್ನು ತಯಾರು ಮಾಡಲಾಗುವುದು. ನಂತರದಲ್ಲಿ ಬೇಕಾದ ಅನುದಾನ ಲಭ್ಯವಾಗಲಿದೆ. ಇದೀಗ ಪ್ರಥಮ ಹೆಜ್ಜೆಯಾಗಿ ಯೋಜನೆಗೆ ಅನುಮೋದನೆ ಪಡೆದು ಕೊಂಡಿರುವುದಾಗಿ ರವಿ ಕಾಳಪ್ಪ ವಿವರವಿತ್ತರು.

ಹಿಂದಿನ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಪ್ರಗತಿ ಬಗ್ಗೆ ಅಧ್ಯಕ್ಷರು ಮಾಹಿತಿ ಪಡೆದುಕೊಂಡರು. ಆರ್ಥಿಕ ವರ್ಷಾಂತ್ಯದವರೆಗೆ ಹಮ್ಮಿಕೊಳ್ಳ ಬಹುದಾದ ಕಾರ್ಯಕ್ರಮಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಮುಂದಿನ ಆರ್ಥಿಕ ವರ್ಷದಲ್ಲಿ ಹೆಚ್ಚಿನ ಅನುದಾನಕ್ಕಾಗಿ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿ, ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಳ್ಳುವ ಸಂಬAಧ ಮಂಡಳಿ ಸದಸ್ಯರು ಸಲಹೆ ನೀಡಿದರು.

ಸನ್ಮಾನ: ಸಭೆ ಆರಂಭಕ್ಕೂ ಮುನ್ನ ರಾಜ್ಯ ಅರಣ್ಯ ನಿಗಮದ ಅಧ್ಯಕ್ಷೆ ತಾರಾ ಅನುರಾಧ ಮತ್ತು ನಿಗಮದ ವ್ಯವಸ್ಥಾಪಕ ನಿರ್ದೇಶಕಿ ರಾಧಾದೇವಿ ಅವರನ್ನು ಸನ್ಮಾನಿಸಲಾಯಿತು. ಮಂಡಳಿಯ ಕಾರ್ಯಚಟುವಟಿಕೆ ಗಳಿಗೆ ಸಹಕಾರ ನೀಡಿದಕ್ಕಾಗಿ ಸನ್ಮಾನಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಮಂಡಳಿ ಸದಸ್ಯ ಕಾರ್ಯದರ್ಶಿ ಅನಿತ ಎಸ್.ಅರೆಕಲ್, ಸದಸ್ಯರಾದ ಉತ್ತರ ಕನ್ನಡದ ಪ್ರಕಾಶ್ ಮೇಸ್ತಾ, ಶಿವಮೊಗ್ಗ ವೆಂಕಟೇಶ್, ಸರ್ಕಾರದ ಪ್ರಧಾನ ಕಾರ್ಯದರ್ಶಿ ವಿಜಯ್ ಮೋಹನ್ ರಾಜ್, ಅರಣ್ಯ ಇಲಾಖೆ ಪಿಸಿಸಿಎಫ್ ಎ.ಕೆ. ಸಿಂಗ್ ಹಾಗೂ ಪ್ರಮುಖರು ಸಭೆಯಲ್ಲಿ ಹಾಜರಿದ್ದರು.