ಸೋಮವಾರಪೇಟೆ, ಜ. ೧೦: ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಸಂದರ್ಭ ಗುಂಡೇಟಿಗೆ ವ್ಯಕ್ತಿಯೋರ್ವರು ಬಲಿಯಾಗಿರುವ ಘಟನೆ ಜಿಲ್ಲೆಯ ಗಡಿಭಾಗ, ಕೂತಿ ಸಮೀಪದ ತಂಬಲಗೇರಿಯಲ್ಲಿ ನಿನ್ನೆ ರಾತ್ರಿ ೮.೧೫ರ ಸುಮಾರಿಗೆ ನಡೆದಿದೆ.

ತಂಬಲಗೇರಿಯ ನವೀನ್ (ಪಚ್ಚಿ-೩೮) ಎಂಬವರೇ ಗುಂಡೇಟಿಗೆ ಬಲಿಯಾದವರು. ನಿನ್ನೆ ಸಂಜೆ ನಾಲ್ವರು ಸ್ನೇಹಿತರೊಂದಿಗೆ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದು, ನದಿಗೆ ಬಲೆಯನ್ನು ಬಿಟ್ಟು ಕಾಯುತ್ತಿರುವ ಸಂದರ್ಭ, ಅಪರಿಚಿತರು ಹಾರಿಸಿದ ಗುಂಡೇಟಿಗೆ ಬಲಿಯಾಗಿದ್ದಾರೆ.

ಹೊಳೆ ಬದಿಯಲ್ಲಿ ಕುಳಿತಿದ್ದ ಸಂದರ್ಭ ಗುಂಡು ಹಾರಿದ್ದು, ನವೀನ್ ಅವರ ತಲೆ ಭಾಗಕ್ಕೆ ಹೊಕ್ಕು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರೊಂದಿಗಿದ್ದ ದಯಾನಂದ ಹಾಗೂ ಪದ್ಮನಾಭ ಅವರುಗಳಿಗೂ ಗುಂಡೇಟು ಬಿದ್ದಿದ್ದು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರೊಂದಿಗಿದ್ದ ರಾಜಾಚಾರಿ ಅವರು ಯಾವುದೇ ಗಾಯಗಳಿಲ್ಲದೇ ಅಪಾಯದಿಂದ ಪಾರಾಗಿದ್ದಾರೆ.

ಕೊಡಗು ಮತ್ತು ಹಾಸನ ಜಿಲ್ಲೆಯ ಗಡಿಯನ್ನು

(ಮೊದಲ ಪುಟದಿಂದ) ಹೊಂದಿಕೊAಡಿರುವ ಈ ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿಯೂ ಹೆಚ್ಚಿದೆ. ಇದರೊಂದಿಗೆ ಬೇಟೆಯೂ ನಡೆಯುತ್ತಿದ್ದು, ಬೇಟೆಗಾರರ ಗುಂಡೇಟಿಗೆ ನವೀನ್ ಬಲಿಯಾಗಿರಬಹುದು ಎಂದು ಸಂಶಯಿಸಲಾಗಿದೆ. ನಿನ್ನೆ ಸಂಜೆ ವೇಳೆಗೆ ತಂಬಲಗೆರೆ ಗ್ರಾಮದ ಈರ್ವರು ಕೋವಿಯೊಂದಿಗೆ ಕಾಡು ಪ್ರದೇಶಕ್ಕೆ ತೆರಳಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ.

ಘಟನೆಯ ಬಗ್ಗೆ ಸ್ಥಳೀಯರು ಯಸಳೂರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ಘಟನೆಗೆ ಸಂಬAಧಿಸಿದAತೆ ಈರ್ವರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಮೃತ ನವೀನ್ ತಾಯಿ, ಪತ್ನಿ ಸೇರಿದಂತೆ ೪ ಹಾಗೂ ೨ ವರ್ಷದ ಈರ್ವರು ಮಕ್ಕಳನ್ನು ಅಗಲಿದ್ದಾರೆ.