ಮಡಿಕೇರಿ, ಜ. ೧೦ : ಶಿಲೀಂಧ್ರ ಗುಂಪಿಗೆ ಸೇರಿದ ಅಣಬೆಗಳು ಒಂದು ರೀತಿಯ ರುಚಿಕರವಾದ ಆಹಾರವೂ ಹೌದು.., ಅಪರೂಪದಲ್ಲಿ ಸಿಗುವ ಈ ಅಣಬೆಗಳಿಗೆ ಬೇಡಿಕೆಯೂ ಇದೆ., ಅದರಲ್ಲೂ ಬೇರು ಅಣಬೆ (ಹೆಗ್ಗಲಳಂಬು)ಗೆ ಇನ್ನಿಲ್ಲದ ಬೇಡಿಕೆ., ಇದು ಸಿಗುವದು ಮಳೆಗಾಲದ ಆರಂಭ ಹಾಗೂ ಕೊನೆಯ ಸಮಯದಲ್ಲಿ ಗುಡುಗು ಸದ್ದಿಗೆ ಭೂಮಿಯೊಳಗಿಂದ ಮೇಲೇಳುತ್ತದೆ. ಇದೇ ಅಣಬೆ ಗ್ರಹಚಾರಕ್ಕೆ ಎಂಬAತೆ ರಸ್ತೆ ಬದಿಯ ಬಸ್ ತಂಗುದಾಣದಲ್ಲಿ ಎದ್ದಿದ್ದು, ಅಣಬೆ ಆಸೆಗಾಗಿ ಸರಕಾರೀ ಆಸ್ತಿಯನ್ನೇ ಬಗೆದು ಅಣಬೆಯನ್ನು ಹೊತ್ತೊಯ್ದು ಭರ್ಜರಿ ಭೋಜನ ಸವಿದಿರುವ ವಿಚಿತ್ರ ಪ್ರಸಂಗ ನಡೆದಿದೆ..!

ಇಲ್ಲಿಗೆ ಸಮೀಪದ ಹಾಕತ್ತೂರು ಮೂಲಕ ಮರಗೋಡುವಿಗೆ ತೆರಳುವ ಮಾರ್ಗದ ಬಕ್ಕ ಎಂಬಲ್ಲಿ ಸುಮಾರು ೨೦ ವರ್ಷಗಳಷ್ಟು ಹಳೆಯದಾದ ಬಸ್ ತಂಗುದಾಣವಿದೆ. ನಿನ್ನೆ ಬೆಳಿಗ್ಗೆ ಶಾಲೆಗೆ ತೆರಳುವ ಮಕ್ಕಳು ಬಸ್‌ಗಾಗಿ ತಂಗುದಾಣಕ್ಕೆ ಆಗಮಿಸಿದ ಸಂದರ್ಭ ತಂಗುದಾಣದ ನೆಲಹಾಸು ಉಬ್ಬಿಕೊಂಡಿರುವದು ಗೋಚರಿಸಿದೆ. ಒಂದು ಬದಿಯಲ್ಲಿ ಒಂದು ಅಣಬೆ ಇದ್ದುದನ್ನು ನೋಡಿದ ಬಾಲಕನೋರ್ವ ಅದನ್ನು ಅಲ್ಲಿ ಮಕ್ಕಳನ್ನು ಬಸ್ ಹತ್ತಿಸಲು ಬಂದಿದ್ದ ಪೋಷಕರಿಗೆ ತೋರಿಸಿದ್ದಾನೆ. ಅದು ಬೇರು ಅಣಬೆ ಎಂದು ತಿಳಿದಾಗ ಅತ್ತಿತ್ತ ನೋಡುವಾಗ ತಂಗುದಾಣದ ಮೆಟ್ಟಿಲ ಬಳಿ ಒಂದಷ್ಟು ಅಣಬೆ ಸಿಕ್ಕಿದ್ದು, ಅದನ್ನು ಪೋಷಕರು ಕೊಂಡೊಯ್ದಿದ್ದಾರೆ.

ಈ ವಿಷಯ ತಿಳಿಯುತ್ತಿದ್ದಂತೆ ಗುಂಪಾಗಿ ಬಂದವರು ತಂಗುದಾಣದ ನೆಲಹಾಸನ್ನು ಬಗೆದು ಅದರೊಳಗಡೆ ಇದ್ದ ರಾಶಿ ರಾಶಿ ಅಣಬೆಯನ್ನು ಮನೆಗೆ ಕೊಂಡೊಯ್ದು ಚಂದದ ಅಡುಗೆ ಮಾಡಿ ಸಾಮೂಹಿಕ ಭೋಜನ ಮಾಡಿದ್ದಾರೆ..! ಬೆಳಿಗ್ಗೆ ಉಬ್ಬಿಕೊಂಡಿದ್ದನ್ನು ನೋಡಿದ್ದ ಶಾಲಾ ಮಕ್ಕಳು ಹಾಗೂ ಶಿಕ್ಷಕರಿಗೆ ಸಂಜೆ ಬಂದು ಬಸ್ ಇಳಿಯುವಾಗ ತಂಗುದಾಣ ನೋಡಿ ಪರಮಾಶ್ಚರ್ಯವಾಗಿದೆ. ತಂಗುದಾಣದ ನೆಲಹಾಸು ಪುಡಿಪುಡಿಯಾಗಿತ್ತು., ಬಸ್ ಏರುತ್ತಿದ್ದವರ ಸ್ಥಳೀಯ ಕೆಲವರ ಕೈಯ್ಯಲ್ಲಿದ್ದ ಪ್ಲಾಸ್ಟಿಕ್ ಚೀಲದೊಳಗಿನ ಅಣಬೆಗಳಲ್ಲಿ ಸಿಮೆಂಟ್‌ನ ಘಾಟು ನೆಲಹಾಸಿನ ಪರಿಸ್ಥಿತಿಯನ್ನು ಅಣಕಿಸುವಂತಿತ್ತು..!

ಅಣಬೆಗಾಗಿ ಸರಕಾರೀ ಆಸ್ತಿಯನ್ನೇ ಪುಡಿಗಟ್ಟಿದ ‘ಪ್ರಜ್ಞಾವಂತರ’ ಮಹಾ ಸಾಧನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಕುಕೃತ್ಯ ಎಸಗಿದವರ ವಿರುದ್ಧ ಆಡಳಿತ ಯಾವ ರೀತಿಯ ಕ್ರಮಕೈಗೊಳ್ಳಲಿ ದೆಯೋ ಎಂಬ ಪ್ರಶ್ನೆ ಹರಿದಾಡು ತ್ತಿದೆ..! ಸದ್ಯ ಮಧ್ಯ ರಸ್ತೆಯಲ್ಲಿ ಮಾತ್ರ ಅಣಬೆ ಏಳದಿರಲಿ ಎಂದು ಸಾರ್ವಜನಿಕರು ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದಾರೆ..!?

?ಸAತೋಷ್